ADVERTISEMENT

ಕಾರ್ಮಿಕ ಕಾಯ್ದೆ ಹಿಂಪಡೆಯಲು ಟ್ರೇಡ್ ಯೂನಿಯನ್ ಸದಸ್ಯರಿಂದ ಒತ್ತಾಯ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:44 IST
Last Updated 4 ಮಾರ್ಚ್ 2026, 5:44 IST
ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸದಸ್ಯರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ನಡೆಸಿದರು 
ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸದಸ್ಯರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ನಡೆಸಿದರು    

ಮೈಸೂರು: ‘ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸದಸ್ಯರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್ ಮಾತನಾಡಿ,  ‘ದೇಶದ ಸಂವಿಧಾನ ಖಾತರಿಪಡಿಸಿರುವ ಒಕ್ಕೂಟ ಪದ್ದತಿಯಲ್ಲಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ನುಂಗುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಕಾರ್ಮಿಕರ ಕುರಿತ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಿಯಮ ಬದಲಿಸಬೇಕು. 4 ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರಿಗೆ ಮಾರಕವಾಗಿರುವ ಅಂಶಗಳನ್ನು ತಿದ್ದುಪಡಿ ಮೂಲಕ ಬದಲಿಸಬೇಕು. ಸಂಹಿತೆಗಳ ಜಾರಿಗೆ ಅಗತ್ಯ ನಿಯಮಾವಳಿ ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಸಂಹಿತೆ ಮತ್ತು ಕರಡು ನಿಯಮಾವಳಿ ಪ್ರಕಟಿಸಿದೆ. ದೇಶದ ಕಾರ್ಮಿಕರಿಗೆ ಈ ಕಾನೂನು ಮತ್ತು ನಿಯಮಾವಳಿಗಳನ್ನು ಅವರವರ ಮಾತೃ ಭಾಷೆಯಲ್ಲಿ ತಿಳಿದುಕೊಳ್ಳುವ ಹಕ್ಕಿದೆ. ಇದನ್ನು ನಿರಾಕರಿಸಬಾರದು. ರಾಜ್ಯ ಸರ್ಕಾರ ಕನ್ನಡದಲ್ಲಿ ಪ್ರಕಟಿಸಬೇಕು. ನಿಯಮಾವಳಿ ಮತ್ತು ಕಾನೂನುಗಳನ್ನು ಓದಲು ರಾಜ್ಯದ ಕಾರ್ಮಿಕರಿಗೆ ಮುಕ್ತ ಅವಕಾಶವಿರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕನ್ನಡದಲ್ಲಿ ಸಂಹಿತೆ ಮತ್ತು ನಿಯಮಾವಾಳಿ ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಲು ಕನಿಷ್ಠ 2 ತಿಂಗಳು ಅವಕಾಶ ನೀಡಬೇಕು. ರಾಜ್ಯ ಸರ್ಕಾರ ತನ್ನ ಅಧಿಕಾರ ಚಲಾಯಿಸಿ ಮೂಲ ಸಂಹಿತೆಗಳಿಗೆ ತಿದ್ದುಪಡಿ ತಂದು ನಂತರ ನಿಯಮಾವಳಿ ರೂಪಿಸಬೇಕು. ಕೂಡಲೇ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಅಣ್ಣಪ್ಪ, ಪುಷ್ಪಲತಾ, ಜಯರಾಂ, ಬಸವಯ್ಯ, ರೇವಣ್ಣ ಸಿದ್ದಪ್ಪ, ಶಶಿಕುಮಾರ್, ಕಮಲಾಕ್ಷಿ, ಲೀಲಾವತಿ, ಚಂದ್ರಿಕಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.