ADVERTISEMENT

ಮೈಸೂರು | ನಿಯಮ ಉಲ್ಲಂಘನೆ: ₹96 ಲಕ್ಷ ದಂಡ ಬಾಕಿ !

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 3:16 IST
Last Updated 23 ಆಗಸ್ಟ್ 2025, 3:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ನಗರ ಪೊಲೀಸ್‌ ಇಲಾಖೆ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ₹ 96 ಲಕ್ಷ  ದಂಡ ಪಾವತಿಯಾಗದೆ ಉಳಿದಿದ್ದು, ಇಲಾಖೆಯು ದಂಡ ಪಾವತಿಗೆ ನೀಡಿರುವ ಶೇ 50 ರಿಯಾಯಿತಿಯಿಂದ ಈ ಭಾರ ಕಡಿಮೆಯಾಗಲಿದೆ ಎಂಬ‌ ಲೆಕ್ಕಾಚಾರದಲ್ಲಿ ಪೊಲೀಸ್ ಅಧಿಕಾರಿಗಳಿದ್ದಾರೆ.

ಸಂಚಾರ ಇ– ಚಲನ್‌ನಲ್ಲಿ ದಾಖಲಾದ ಪ್ರಕರಣ ಇತ್ಯರ್ಥಪಡಿಸಲು ಶನಿವಾರ (ಆ.23)ದಿಂದ ಅವಕಾಶ ನೀಡಿದೆ. ಸೆ.12ರವರೆಗಿನ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ 50 ರಿಯಾಯಿತಿ ದೊರೆಯಲಿದೆ.

ಈ ಹಿಂದೆ 2023ರ ಫೆ.3ರಿಂದ 11ರವರೆಗೆ ಇಲಾಖೆಯು ದಂಡ ಪಾವತಿಗೆ ಶೇ 50 ರಿಯಾಯಿತಿ ನೀಡಿದಾಗ, ಪೊಲೀಸ್‌ ಇಲಾಖೆಯು ಕಮಿಷನರೇಟ್‌ ವ್ಯಾಪ್ತಿಯಲ್ಲಿ ₹ 71.74 ಕೋಟಿ ದಂಡ ಸಂಗ್ರಹಿಸಬೇಕು ಎಂಬ ಗುರಿ ಹೊಂದಿತ್ತು. ಆದರೆ 9 ದಿನಗಳಲ್ಲಿ ₹ 12.30 ಕೋಟಿ ದಂಡ ಪಾವತಿಯಾಗಿತ್ತು. ಆ ಮೂಲಕ ಸಾರ್ವಜನಿಕರು ಸಂಚಾರ ಇ-ಚಲನ್‌ನ 4,98,265 ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದರು. ಗುರಿ ಮುಟ್ಟಲು ಇಲಾಖೆಯು ಮತ್ತೆ ಹದಿನೈದು ದಿನ ಈ ಅವಕಾಶ ಮುಂದುವರಿಸಿತ್ತು.

ADVERTISEMENT

‘ಇಲಾಖೆಯ ಸಾಫ್ಟ್‌ವೇರ್‌ಗಳಲ್ಲಿ ರಿಯಾಯಿತಿ ದರ ರಾತ್ರಿಯೊಳಗೆ ಅಪ್‌ಡೇಟ್‌ ಆಗುತ್ತದೆ. ನಂತರ ಕೆಎಸ್‌ಪಿಎಸ್‌ ಆ್ಯಪ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ, ಎಲ್ಲಾ ಸಂಚಾರ ಠಾಣೆ ಹಾಗೂ ಕಮಿಷನರ್ ಕಚೇರಿಯಲ್ಲಿರುವ ಸಂಚಾರ ನಿಯಂತ್ರಣ ಕೇಂದ್ರ (ಟಿಎಂಸಿ)ದಲ್ಲಿ ದಂಡ ಪಾವತಿಸಬಹುದು’ ಎಂದು ಡಿಸಿಪಿ ಕೆ.ಎಸ್‌.ಸುಂದರ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೀಟ್‌ ಬೆಲ್ಟ್‌, ಹೆಲ್ಮೆಟ್‌ ಧರಿಸದೆ ಪ್ರಯಾಣ, ಪ್ರಯಾಣದ ಸಮಯದಲ್ಲಿ ಮೊಬೈಲ್‌ ಫೋನ್ ಬಳಕೆ, ಟ್ರಿಪಲ್‌ ರೈಡಿಂಗ್‌, ನಿರ್ಬಂಧಿತ ರಸ್ತೆಯಲ್ಲಿ ಪ್ರಯಾಣ, ಸಿಗ್ನಲ್‌ ಜಂಪ್, ಅತಿ ವೇಗದ ಚಾಲನೆ ಮಾಡುವವರನ್ನು ಎಐ ಕ್ಯಾಮೆರಾ ಗುರುತಿಸುತ್ತಿದೆ. ಅದನ್ನು ಆಧರಿಸಿ ದಂಡ ವಿಧಿಸಲಾಗಿದೆ’ ಎಂದರು.

ಕಣ್ಗಾವಲಿಗೆ 380 ಕ್ಯಾಮೆರಾ

ನಗರದ ಎಲ್ಲ ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಇಲಾಖೆಯು 380 ಕ್ಯಾಮೆರಾಗಳನ್ನು ಅಳವಡಿಸಿದ್ದು ಅವುಗಳಲ್ಲಿ ಕಣ್ಗಾವಲು (ಸರ್ವೈವಲೆನ್ಸ್‌) ಕ್ಯಾಮೆರಾಗಳನ್ನು ಕಳ್ಳತನ ಹಾಗೂ ಇತರೆ ಅಪರಾಧ ಕೃತ್ಯಗಳ ಬಗ್ಗೆ ಗಮನಿಸಲು ಬಳಸಲಾಗುತ್ತಿದೆ.

‘ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (ಐಟಿಎಂಎಸ್‌) ಆಟೊಮೆಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನೈಶೇಷನ್‌ (ಎಎನ್‌ಪಿಆರ್‌) ಪ್ಯಾನ್‌– ಟಿಲ್ಟ್‌– ಜೂಮ್‌ (ಪಿಟಿಜೆಡ್‌) ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚಲಾಗುತ್ತಿದ್ದು ನಿಯಮ ಉಲ್ಲಂಘಿಸಿದ ವಾಹನದ ಆರ್‌ಸಿ ಹೊಂದಿರುವವರ ಮೊಬೈಲ್‌ಗೆ ದಂಡ ಹಾಗೂ ಅದರ ಚಲನ್‌ ಕಳುಹಿಸಲಾಗುತ್ತಿದೆ’ ಎಂದು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಕೆ.ಎಸ್‌.ಸುಂದರ್‌ ರಾಜ್‌ ತಿಳಿಸಿದರು.

ಎರಡು ಬಾರಿ ರಿಯಾಯಿತಿ ನೀಡಿದಾಗ ಕಮಿಷನರೇಟ್‌ ವ್ಯಾಪ್ತಿಯಲ್ಲಿ ₹ 150 ಕೋಟಿ ದಂಡ ಪಾವತಿಯಾಗಿತ್ತು. ಸಾರ್ವಜನಿಕರು ರಿಯಾಯಿತಿ ಅವಕಾಶ ಬಳಸಿಕೊಳ್ಳಬೇಕು
ಎಂ.ಶಿವಶಂಕರ್‌, ಎಸಿಪಿ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.