ADVERTISEMENT

ಬಾಣಂತಿಯರನ್ನು ನೆಲದಲ್ಲಿ ಮಲಗಿಸಿ ಚಿಕಿತ್ಸೆ: ಶಾಸಕ ಗರಂ

ಚೆಲುವಾಂಬ ಆಸ್ಪತ್ರೆಯಲ್ಲಿ ಅವ್ಯವಸ್ಥೆ–ಶಾಸಕರ ದಿಢೀರ್‌ ಭೇಟಿ, ವೈದ್ಯರ ವಿರುದ್ಧ ಗರಂ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 10:19 IST
Last Updated 20 ಜೂನ್ 2018, 10:19 IST
 ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿಯರನ್ನು ನೆಲದಲ್ಲಿ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಾಸಕ ಎಲ್‌.ನಾಗೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿಯರನ್ನು ನೆಲದಲ್ಲಿ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಾಸಕ ಎಲ್‌.ನಾಗೇಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು   

ಮೈಸೂರು: ಕೆ.ಆರ್‌.ಆಸ್ಪತ್ರೆ ಆವರಣದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ಬಾಣಂತಿಯರು ಹಾಗೂ ಪುಟಾಣಿಗಳನ್ನು ನೆಲದಲ್ಲಿ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶುಚಿತ್ವ ಕಾಪಾಡದ ಕಾರಣ ಇಲಿ, ಹೆಗ್ಗಣಗಳ ಕಾಟ ಜೋರಾಗಿದೆ.

ಮಳೆಗಾಲದ ಕಾರಣ ನೆಲ ಥಂಡಿಯಿಂದ ಕೂಡಿದ್ದು, ಮಕ್ಕಳಿಗೆ ಸೋಂಕು ತಗುಲುವ ಆತಂಕ ಉಂಟಾಗಿದೆ. ನೂರಾರು ಬಾಣಂತಿಯರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಕಾರಣ ಶಾಸಕ ಎಲ್‌.ನಾಗೇಂದ್ರ ಅವರು ಮಂಗಳವಾರ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಇದು ಮಳೆಗಾಲ. ಇಂಥ ಸಂದರ್ಭದಲ್ಲಿ ಬಾಣಂತಿಯರನ್ನು ಹಾಗೂ ಮಕ್ಕಳನ್ನು ನೆಲದ ಮೇಲೆ ಮಲಗಿಸಿದ್ದೀರಿ. ಶೀತ ಉಂಟಾಗಿ ತಾಯಿ, ಮಗುವಿಗೆ ಸೋಂಕು ತಗುಲಿದರೆ ಯಾರು ಜವಾಬ್ದಾರಿ? ವೈದ್ಯರಾಗಿರುವ ನಿಮಗೆ ಈ ವಿಚಾರ ಗೊತ್ತಿಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವಿವಿಧ ಜಿಲ್ಲೆಗಳಿಂದ ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ರೋಗಿಗಳು ಬರುತ್ತಿದ್ದಾರೆ. ಹೆಚ್ಚಿನವರು ಬಡ ಕುಟುಂಬದಿಂದ ಬಂದವರು. ಇಂಥವರಿಗೆ ಸಮಸ್ಯೆಯಾದರೆ ಯಾರು ಕಾಳಜಿ ವಹಿಸುತ್ತಾರೆ’ ಎಂದು ಪ್ರಶ್ನಿಸಿದರು. ತಕ್ಷಣವೇ ಬದಲಿ ವ್ಯವಸ್ಥೆ ಮಾಡಬೇಕು. ಪಕ್ಕದಲ್ಲಿರುವ ವಾರ್ಡ್‌ಗಳಲ್ಲಿ ಖಾಲಿ ಇರುವ ಹಾಸಿಗೆಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು.

ಶಾಸಕರು ಬಾಣಂತಿಯರ ಆರೋಗ್ಯ ವಿಚಾರಿಸಿದರು. ಭೇಟಿ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕರು ರಜೆಯಲ್ಲಿದ್ದರು. ‘ಹೆರಿಗೆಯಾಗಿ ಎರಡು ದಿನಗಳಷ್ಟೇ ಆಗಿದೆ. ಹಾಸಿಗೆ ಕೊರತೆಯಿಂದ ನೆಲದಲ್ಲಿ ಹಾಸಿಗೆ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ. ನಮಗೂ ಬೇರೆ ದಾರಿ ಇಲ್ಲ’ ಎಂದು ಬಾಣಂತಿಯೊಬ್ಬರು ಪ್ರತಿಕ್ರಿಯಿಸಿದರು.

‘ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಹಾಸಿಗೆಗಳ ಕೊರತೆ ಉಂಟಾಗಿದೆ. ನಿತ್ಯ 100 ಪ್ರಕರಣಗಳು ಬರುತ್ತಿವೆ. ಸದ್ಯ 420 ಹಾಸಿಗೆಗಳು ಇವೆ. ಜೊತೆಗೆ ಕೊಠಡಿಗಳ ಕೊರತೆಯೂ ಉಂಟಾಗಿದೆ’ ಎಂದು ವೈದ್ಯರು ಸಮಜಾಯಿಷಿ ನೀಡಿದರು.

ಆಸ್ಪತ್ರೆಯ ಶೌಚಾಲಯಗಳಲ್ಲಿ ಇಲಿ, ಹೆಗ್ಗಣ ಓಡಾಡುತ್ತಿವೆ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿಲ್ಲ. ಸೌಲಭ್ಯ ಒದಗಿಸಲು ಆರೋಗ್ಯ ಸಚಿವರಿಗೆ ಮನವಿ ಮಾಡುತ್ತೇನೆ
ಎಲ್‌.ನಾಗೇಂದ್ರ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.