ADVERTISEMENT

ಹೈದರಾಲಿ ರಸ್ತೆಯಲ್ಲಿ 40 ಮರಗಳ ಹನನ: ತಿಂಗಳಾದರೂ ಸಲ್ಲಿಕೆಯಾಗದ ವರದಿ

ಮೋಹನ್ ಕುಮಾರ ಸಿ.
Published 21 ಮೇ 2025, 6:06 IST
Last Updated 21 ಮೇ 2025, 6:06 IST
ಎ.ಎನ್. ರಘುನಂದನ್
ಎ.ಎನ್. ರಘುನಂದನ್    

ಮೈಸೂರು: ನಜರ್‌ಬಾದ್‌ನ ಹೈದರಾಲಿ ರಸ್ತೆಯಲ್ಲಿ 40 ಮರಗಳ ಹನನ ಪ್ರಕರಣ ಕುರಿತ ವಾಸ್ತವತೆ ಪರಿಶೀಲಿಸಲು ಜಿಲ್ಲಾಡಳಿತ ಸಮಿತಿ ರಚಿಸಿ ತಿಂಗಳಾದರೂ, ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಆಡಳಿತ ವ್ಯವಸ್ಥೆಯ ಆಮೆಗತಿಯ ಕಾರ್ಯಕ್ಕೆ ಪರಿಸರ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಏ.13ರಂದು ನಡೆದ ಹನನ ಖಂಡಿಸಿ ಮೈಸೂರಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಅರಣ್ಯ ಇಲಾಖೆ ಹಾಗೂ ಪಾಲಿಕೆಯ ವಿರುದ್ಧ ಸರಣಿ ಪ್ರತಿಭಟನೆ ನಡೆಸಿದ್ದರು. ಮೋಂಬತ್ತಿ ಮೆರವಣಿಗೆ, ಮರಗಳಿಗೆ ಶ್ರಾದ್ಧ, ಚಿತ್ರಕಲೆಯ ಮೂಲಕ ಅಭಿವ್ಯಕ್ತಿಸಿದ್ದರು.

ಮೂವರ ಸಮಿತಿ: ಮುಡಾ ಆಯುಕ್ತ ಅಧ್ಯಕ್ಷತೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಹಾಗೂ ಹುಣಸೂರಿನ ಡಿಸಿಎಫ್‌ ಒಳಗೊಂಡ ಮೂವರ ತನಿಖಾ ಸಮಿತಿಯನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಕಳೆದ ಏ.21ರಂದು ರಚಿಸಿ, ತನಿಖೆ ನಡೆಸಿ ವರದಿ ಸಲ್ಲಿಸಲು 7 ದಿನಗಳ ಗಡುವು ನೀಡಿದ್ದರು. 

ADVERTISEMENT

‘ರಸ್ತೆ ವಿಸ್ತರಣೆಯ ಅಗತ್ಯತೆ’, ‘40 ಮರ ಕಡಿತ ಅನಿವಾರ್ಯತೆ’ ಹಾಗೂ ‘ಶಾಸನಬದ್ಧ ಕಾರ್ಯವಿಧಾನ ಅನುಸರಿಸಿ ನಿಯಮ ಪಾಲನೆ ಮಾಡಲಾಗಿದೆಯೇ’ ಎಂಬುದರ ಬಗ್ಗೆ ಸಮಿತಿಯು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಗಡುವಿನ ಅವಧಿ 7 ದಿನ ಕಳೆದು, 30 ದಿನವಾದರೂ ಸಮಿತಿಯ ವರದಿ ಜಿಲ್ಲಾಡಳಿತ ಸೇರಿಲ್ಲ.

ವಿವರಣೆ ಕೇಳಿದ್ದ ಕೇಂದ್ರ ಹಾಗೂ ರಾಜ್ಯ: ಮರಗಳ ಹನನಕ್ಕೆ ಅರಣ್ಯ ಇಲಾಖೆಯು ನೀಡಿರುವ ಅನುಮತಿ ಸಂಬಂಧ ವಿವರಣೆ ಕೇಳಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ  ರಾಜ್ಯ ಸರ್ಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಿಂಗಳ ಹಿಂದೆಯೇ ಪತ್ರ ಬರೆದಿದ್ದಾರೆ.

ಕೇಂದ್ರ ಅರಣ್ಯ ಸಚಿವಾಲಯದ ಸಹಾಯಕ ಆಯುಕ್ತ ರವೀಂದರ್ ಸಿಂಗ್ ಅವರು, ‘ಪ್ರಕರಣದ ಬಗ್ಗೆ ಪರಿಶೀಲಿಸಬೇಕು. ಅರಣ್ಯ ಕಾಯ್ದೆ ಹಾಗೂ ನಿಯಮಾವಳಿಯನ್ನು ಪಾಲಿಸಲಾಗಿದೆಯೇ ಎಂಬುದನ್ನು ವಿವರಿಸಬೇಕು’ ಎಂದು ಪಿಸಿಸಿಎಫ್‌ಗೆ ಏ.27ರಂದು ಪತ್ರ ಬರೆದು ಸೂಚಿಸಿದ್ದರು. ಈ ಮೊದಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೂ, ಹನನ ನಡೆದ ವಾರದ ನಂತರ ಏ.19ರಂದು ಅವರಿಗೆ ಇದೇ ಪ್ರಶ್ನೆಗಳನ್ನು ಕೇಳಿದ್ದರು.

‘ತಿಂಗಳಾದರೂ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ’ ಎಂಬುದು ಅಭಿಪ್ರಾಯ ಪರಿಸರ ತಜ್ಞರಲ್ಲಿ ವ್ಯಕ್ತವಾಗಿದೆ. 

ಪರಶುರಾಮೇಗೌಡ
ವರದಿಗೆ ಜಿಲ್ಲಾಡಳಿತ 7 ದಿನ ಗಡುವು  ತನಿಖಾ ಸಮಿತಿ ರಚಿಸಿ ಇಂದಿಗೆ ತಿಂಗಳು ವಿಳಂಬಕ್ಕೆ ಪರಿಸರ ಪ್ರಿಯರ ಕಳವಳ 
40 ಮರಗಳ ಹನನ ಪ್ರಕರಣ ಕುರಿತು ಪರಿಶೀಲನೆ ನಡೆಸಲಾಗಿದ್ದು ಒಂದೆರಡು ದಿನದಲ್ಲಿಯೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು
ರಘುನಂದನ್ ತನಿಖಾ ಸಮಿತಿ ಅಧ್ಯಕ್ಷ ಹಾಗೂ ಮುಡಾ ಆಯುಕ್ತ

‘ನೆನಪಿನೋಲೆ ಬರೆವೆವು’

‘ಜಿಲ್ಲಾಡಳಿತ ರಚಿಸಿದ್ದ ತನಿಖಾ ಸಮಿತಿಗೆ ‘ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ’ಯ ನಾಲ್ವರು ಸದಸ್ಯರನ್ನೂ ಸೇರಿಸಿಕೊಳ್ಳುವಂತೆ 10 ಜನರ ಪಟ್ಟಿಯನ್ನೂ ಕೊಟ್ಟಿದ್ದೆವು. ಪರಿಗಣಿಸಿಲ್ಲ. ಈಗ ಸಮಿತಿ ರಚಿಸಿ ತಿಂಗಳಾದರೂ ವರದಿ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನೆನಪಿನೋಲೆ ಬರೆಯುತ್ತೇವೆ’ ಎಂದು ‘ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ’ ಸದಸ್ಯ ಪರಶುರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ದೇಶದಲ್ಲಿ ಕದನದ ಆತಂಕವಿದ್ದರಿಂದ ಯಾವುದೇ ಒತ್ತಾಯವನ್ನೂ ಮಾಡಿಲ್ಲ. ಜಿಲ್ಲೆಯ ಪರಿಸರ ಉಳಿವಿಗಾಗಿ ಕೈಗೊಳ್ಳಬೇಕಾದ ಅಗತ್ಯ ಪಟ್ಟಿಯನ್ನು ಸಮಿತಿಯು ರಚಿಸಿದ್ದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.