ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬ್ಲಾಕ್ 2 ರ ನಿವಾಸಿ ಜೆ.ಕೆ.ಮನು ಎಂಬುವವರ ಮನೆ ಮೇಲೆ ಶನಿವಾರ ಸೆಸ್ಕ್ ಸಿಬ್ಬಂದಿ ಮರದ ರೆಂಬೆ ಕತ್ತರಿಸಿ ಬೀಳಿಸಿದ್ದರಿಂದ ಮನೆಯ ಒಂದು ಭಾಗ ಜಖಂಗೊಂಡಿದೆ
ಹುಣಸೂರು: ಶನಿವಾರ ಮಧ್ಯಾಹ್ನ ಸೆಸ್ಕ್ ಸಿಬ್ಬಂದಿ ಆಲದ ಮರದ ರೆಂಬೆ ಕತ್ತರಿಸುವ ಭರದಲ್ಲಿ ನಾಗಾಪುರ ಆದಿವಾಸಿ ಬುಡಕಟ್ಟು ಸಮುದಾಯ ಪುನರ್ವಸತಿ ಕೇಂದ್ರದ ನಿವಾಸಿ ಮನು ಎಂಬುವವರ ಮನೆ ಮೇಲೆ ಬೀಳಿಸಿದ್ದರಿಂದ ಮನೆ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ ಎಂದು ಬ್ಲಾಕ್ 2 ರ ಮುಖಂಡ ಜೆ.ಕೆ.ಮಣಿ ಆರೋಪಿಸಿದ್ದಾರೆ.
‘ಘಟನೆ ನಡೆದ ಸಮಯದಲ್ಲಿ ಮನೆಯ ಮಾಲೀಕ ಹೊಲದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದರು. ಈ ಸಂಬಂಧ ಹನಗೋಡು ಸೆಸ್ಕ್ ವಿಭಾಗದ ಎಂಜಿನಿಯರ್ ಗೆ ದೂರವಾಣಿ ಮೂಲಕ ತಿಳಿಸಿ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗಿರಿಜನರ ಮನೆ ಮೇಲೆ ಮರದ ರೆಂಬೆ ಬಿದ್ದಿದ್ದು ಇಲಾಖೆ ಸ್ಪಂದಿಸದೆ ಅಮಾನವೀಯವಾಗಿ ವರ್ತಿಸಿದೆ’ ಎಂದು ಅವರು ಆರೋಪಿಸಿದ್ದಾರೆ. ಮನೆ ದುರಸ್ತಿಗೆ ಆರ್ಥಿಕ ಸಹಾಯ ಇಲಾಖೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹನಗೋಡು ಸೆಸ್ಕ್ ಎಂಜಿನಿಯರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸುವ ಪ್ರಯತ್ನ ಮಾಡಿತಾದರೂ ದೂರವಾಣಿ ಕರೆಗೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.