ADVERTISEMENT

ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ: ಮೊದಲ ತಲೆಮಾರಿನ ವಿದ್ಯಾವಂತರಿಗೆ ನೌಕರಿ

ಎಂ.ಮಹೇಶ
Published 20 ಫೆಬ್ರುವರಿ 2026, 2:42 IST
Last Updated 20 ಫೆಬ್ರುವರಿ 2026, 2:42 IST
ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದಲ್ಲಿರುವ ಮೂಲ ಆದಿವಾಸಿಗಳ ಕೇಂದ್ರದ ನೋಟ
ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದಲ್ಲಿರುವ ಮೂಲ ಆದಿವಾಸಿಗಳ ಕೇಂದ್ರದ ನೋಟ   

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ (ಕೆಎಸ್‌ಟಿಆರ್‌ಐ) ಭಾಗವಾಗಿರುವ ‘ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ’ದಲ್ಲಿ ಮೂಲ ಆದಿವಾಸಿಗಳ ಮೊದಲ ತಲೆಮಾರಿನ ವಿದ್ಯಾವಂತರಿಗೆ ಉದ್ಯೋಗ ನೀಡಿರುವುದು ಗಮನಸೆಳೆದಿದೆ.

‘ಅಕ್ಷರ ಸಂಸ್ಕೃತಿ’ಯಿಂದ ದೂರವಾಗಿದ್ದ ಈ ಸಮುದಾಯದಲ್ಲಿ ಪ್ರವಾಹದ ವಿರುದ್ಧ ಈಜಿ ವಿದ್ಯಾವಂತರಾದವರನ್ನು ಕೈಹಿಡಿಯುವ ಕೆಲಸವನ್ನು ಮಾಡಲಾಗಿದೆ. ಹೊರ ಗುತ್ತಿಗೆ ಆಧಾರದಲ್ಲಿ ನೌಕರಿಗೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ, ಆ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ಪ್ರಯತ್ನ ನಡೆದಿದೆ.

ಪ್ರಸ್ತುತ, ವಿವಿಧ ಬುಡಕಟ್ಟುಗಳ ವಿವಿಧ ವಿದ್ಯಾರ್ಹತೆಯ 10 ಮಂದಿಗೆ ಉದ್ಯೋಗ ದೊರೆತಿದೆ.

ADVERTISEMENT

ಇರುಳಿಗ ಬುಡಕಟ್ಟಿನ ಸಂಶೋಧನಾಧಿಕಾರಿ...

ಇಲ್ಲಿನ ಸಂಶೋಧನಾಧಿಕಾರಿ ಆಗಿರುವ ಕೃಷ್ಣಮೂರ್ತಿ ಕೆ.ವಿ. ಇರುಳಿಗ ಬುಡಕಟ್ಟಿನವರು. ಹಂಪಿ ಕನ್ನಡ ವಿ.ವಿ. ಪಿಎಚ್‌.ಡಿ. ಪದವೀಧರ. ಹುಣಸೂರು ತಾಲ್ಲೂಕು ನಾಗಾಪುರ ಹಾಡಿಯ 5ನೇ ಘಟಕದ ಮಹೇಶ ಮಾಹಿತಿ ಸಂಗ್ರಹಕಾರರಾಗಿದ್ದಾರೆ. ಬೆಟ್ಟಕುರುಬ ಬುಡಕಟ್ಟಿನ ಅವರು, ಮೈಸೂರು ವಿ.ವಿ.ಯಿಂದ ಎಂಎಸ್‌ಡಬ್ಲ್ಯು ಪದವೀಧರ. 

ಚಿಕ್ಕಮಗಳೂರು ಜಿಲ್ಲೆ ಶೆಟ್ಟಿಹಿತ್ಲು ಗ್ರಾಮದ, ಮಂಗಳೂರು ವಿ.ವಿ.ಯಿಂದ ಎಂ.ಕಾಂ. ಪದವೀಧರೆ ರಶ್ಮಿ (ಹಸಲರು) ಡೇಟಾ ಎಂಟ್ರಿ ಆಪರೇಟರ್‌ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕಲ್ಲೇರಿ ಕಟ್ಟೆಮನೆಯ ಸುಮಲತಾ ಬಿ.ಕೆ. (ಮಲೆಕುಡಿಯ) ಮಂಗಳೂರು ವಿ.ವಿ.ಯಿಂದ ಎಂಎಸ್‌ಡಬ್ಲ್ಯು ಪದವಿ ಪಡೆದಿದ್ದು, ಕ್ಷೇತ್ರ ಸಂಶೋಧಕರಾಗಿದ್ದಾರೆ. 

ಹಲವು ವಿದ್ಯಾರ್ಹತೆಯವರು...

ಎಚ್‌.ಡಿ. ಕೋಟೆ ತಾಲ್ಲೂಕಿನ ಬಳ್ಳೆಹಾಡಿಯ ಹರ್ಷಿತಾ (ಜೇನುಕುರುಬ) ಮಾಹಿತಿ ಸಂಗ್ರಹಕಾರರಾಗಿದ್ದಾರೆ. ಇವರು ಬೆಂಗಳೂರಿನ ಎನ್ಎಫ್‌ಟಿ ಕಾಲೇಜಿನಲ್ಲಿ ಡಿಪ್ಲೊಮಾ ಇನ್‌ ಟೂಲ್ ಎಂಜಿನಿಯರಿಂಗ್‌ ಅಂಡ್ ಡಿಜಿಟಲ್‌ ಮಾನ್ಯುಫ್ಯಾಕ್ಚರಿಂಗ್‌ ವಿದ್ಯಾರ್ಹತೆಯವರು.

ಊಟಿಯ ಭಾರತೀಯರ್ ವಿ.ವಿಯಿಂದ ಬಿ.ಕಾಂ. ಪದವಿ ಪಡೆದಿರುವ ಸ್ನೇಹಾ (ಇರುಳ) ಮಾಹಿತಿ ಸಂಗ್ರಹಕಾರರಾಗಿದ್ದಾರೆ. ಹುಣಸೂರು ತಾಲ್ಲೂಕು ನಾಗಾಪುರಹಾಡಿಯ ಜೇನುಕುರುಬ ಬುಡಕಟ್ಟಿನ ಗೀತಾ ಅವರಿಗೆ ಮಾಹಿತಿ ಸಂಗ್ರಹಕಾರರಾಗಿ ಕೆಲಸ ಸಿಕ್ಕಿದೆ. ಇವರು ಮೈಸೂರು ವಿ.ವಿ.ಯಿಂದ ಎಂಎಸ್‌ಡಬ್ಲ್ಯು ಪದವಿ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಬೇಡಕ್ಕಿ ಕಳಸದ ಪುಷ್ಪಾ (ಗೌಡಲು) ಮಾಹಿತಿ ಸಂಗ್ರಹಕಾರರಾಗಿದ್ದಾರೆ. ಈ ಪ್ರತಿಭೆ ಮಂಗಳೂರು ವಿವಿಯಿಂದ ಎಂಎ ಪದವಿ ಪಡೆದಿದೆ. ಕುವೆಂಪು ವಿ.ವಿಯಿಂದ ಪದವಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ನೆಲ್ಲಿಮಕ್ಕಿಯ ಹಶ್ವಿತಾ (ಹಸಲರು) ಮಾಹಿತಿ ಸಂಗ್ರಹಕಾರರಾಗಿ ನೌಕರಿ ಮಾಡುತ್ತಿದ್ದಾರೆ. ಎಚ್‌.ಡಿ. ಕೋಟೆಯ ವಿಜಯಕುಮಾರ್‌ (ಯರವ, ಪಿಯುಸಿ) ‘ಡಿ’ ಗ್ರೂಪ್‌ ನೌಕರರಾಗಿದ್ದಾರೆ.

ಸಂಸ್ಥೆಯ ನಿರ್ದೇಶಕ ಯೋಗೇಶ್‌ ಟಿ. ಮೂಲ ಆದಿವಾಸಿಗಳಿಗೆ ನೌಕರಿಯಲ್ಲಿ ಆದ್ಯತೆ ನೀಡಿದ್ದಾರೆ. ಕಾಡು, ಕಾಡಂಚಿನ ಬುಡಕಟ್ಟುಗಳ ಮೊದಲ ತಲೆಮಾರಿನ ವಿದ್ಯಾವಂತರಿಗೆ ನೌಕರಿ ನೀಡಿ ಆ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.

‘ತಮ್ಮನ್ನು ಹೊರ ಗುತ್ತಿಗೆ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಮೊದಲ ತಲೆಮಾರಿನ ವಿದ್ಯಾವಂತರಾದ ನಮ್ಮನ್ನು ಕಾಯಂಗೊಳಿಸಬೇಕು’ ಎನ್ನುವುದು ಈ ಬುಡಕಟ್ಟಿನ ಪ್ರತಿಭೆಗಳ ಮನವಿಯಾಗಿದೆ.

ಟಿ. ಯೋಗೇಶ್
ಅರಣ್ಯಾಧಾರಿತ ಮೂಲ ಆದಿವಾಸಿಗಳ ವಿಶೇಷ ನೇರ ನೇಮಕಾತಿಗೆ ಬಜೆಟ್‌ನಲ್ಲಿ ಘೋಷಿಸಲಾಗಿದ್ದು ಅದಕ್ಕೆ ಸಂಬಂಧಿಸಿದ ಪ್ರಸ್ತಾವ ಸರ್ಕಾರದ ಮುಂದಿದೆ.
ಯೋಗೇಶ್ ಟಿ. ನಿರ್ದೇಶಕರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ

ಹೊರಗುತ್ತಿಗೆ ಮೇಲೆ...

‘ಕೇಂದ್ರದಲ್ಲಿ ಖಾಲಿ ಹುದ್ದೆಗಳು ಜಾಸ್ತಿ ಇದ್ದವು. ಹೀಗಾಗಿ ಆ ಬುಡಕಟ್ಟುಗಳಿಗೆ ಸೇರಿದವರನ್ನೇ ಹೊರಗುತ್ತಿಗೆ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದೆ. ಅದರಂತೆ ಪ್ರಕ್ರಿಯೆ ನಡೆದಿದೆ. ಇದರಿಂದ ಅವರಿಗೆ ನೌಕರಿ ಸಿಗುವ ಜೊತೆಗೆ ಸಂಶೋಧನೆಯೂ ಸಾಧ್ಯವಾಗಲಿದೆ’ ಎಂದು ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಯೋಗೇಶ್‌ ಟಿ. ‘ಪ್ರಜಾವಾಣಿ’ಗೆ ತಿಳಿಸಿದರು. 

ಏನಿದು ಕೇಂದ್ರ?

ರಾಜ್ಯ ಸರ್ಕಾರವು 2015-16ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಬುಡಕಟ್ಟು ಸಂಶೋಧನಾ ಸಂಸ್ಥೆಯ ಘಟಕವಾಗಿ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. ಇದು ರಾಜ್ಯದಲ್ಲಿರುವ 12 ಅರಣ್ಯಾಧಾರಿತ ಮೂಲ ಆದಿವಾಸಿಗಳಾದ ಜೇನುಕುರುಬ ಕೊರಗ ಬೆಟ್ಟಕುರುಬ ಸೋಲಿಗ ಇರುಳಿಗ ಹಸಲರು ಗೌಡಲು ಪಣಿಯ ಯರವ ಕುಡಿಯ ಸಿದ್ದಿ ಮತ್ತು ಮಲೆಕುಡಿಯ ಬುಡಕಟ್ಟುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪೂರಕವಾದ ಅಧ್ಯಯನ ನಡೆಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.