
ಮೈಸೂರು: ‘ಆದಿವಾಸಿಗಳು ಪ್ರಪಂಚದ ಅತ್ಯಂತ ಪುರಾತನ ಸಂಸ್ಕೃತಿ ಮತ್ತು ಜ್ಞಾನದ ವಾರಸುದಾರರು’ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಎಂ.ಆರ್.ಗಂಗಾಧರ್ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಿಂದ ಸೋಮವಾರ ನಡೆದ ‘ಬುಡಕಟ್ಟು ಜನರ ಆರೋಗ್ಯ ಮತ್ತು ಆರೋಗ್ಯ ರಕ್ಷಣಾ ಪದ್ಧತಿಗಳ ಮೇಲೆ ಜಾಗತೀಕರಣ ಮತ್ತು ಸಾಂಸ್ಕೃತಿಕ ನಂಬಿಕೆಗಳ ಪ್ರಭಾವ’ ಕುರಿತ 2 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಆರೋಗ್ಯ ಎಂದರೆ ಕೇವಲ ಔಷಧ ಮತ್ತು ಆಸ್ಪತ್ರೆಯಲ್ಲ, ಅದು ಪೌಷ್ಠಿಕತೆ, ನಂಬಿಕೆ, ಪಾರಂಪರಿಕತೆ ಮತ್ತು ಅಸ್ಮಿತೆಯನ್ನು ಒಳಗೊಂಡಿದೆ. ಆದಿವಾಸಿಗಳ ವಿಶೇಷವಾದ ಜ್ಞಾನ ಜಾಗತೀಕರಣದಲ್ಲಿ ಸ್ಥಾನ ಪಲ್ಲಟಗೊಳ್ಳುತ್ತಿದೆ. ಆದಿವಾಸಿಗಳ ಪಾರಂಪರಿಕ ಜ್ಞಾನವನ್ನು ನಮ್ಮ ಆಧುನಿಕ ವೈದ್ಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ’ ಎಂದರು.
‘ಜಾಗತೀಕರಣವೂ ಹಲವು ಸುಧಾರಣೆಗಳನ್ನು ತಂದಿದೆ. ಸರ್ಕಾರಿ ಯೋಜನೆಗಳು ದೂರದ ಪ್ರದೇಶಗಳನ್ನು ತಲುಪುತ್ತವೆ. ಮೊಬೈಲ್ ಚಿಕಿತ್ಸಾಲಯಗಳು, ತರಬೇತಿ ಪಡೆದ ವೈದ್ಯರು ಬುಡಕಟ್ಟು ಪ್ರದೇಶಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
ಸಹಪ್ರಾಧ್ಯಾಪಕ ಜೈ ಪ್ರಭಾಕರ್ ಎಸ್.ಸಿ. ಮಾತನಾಡಿ, ‘ಆದಿವಾಸಿಗಳ ಆರೋಗ್ಯದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಇದರಲ್ಲಿ ಧಾರ್ಮಿಕ ನಂಬಿಕೆಗಳಿಗೆ ಬೆಲೆ ಕೊಡಬೇಕು. ದೇಶೀಯತೆಯನ್ನು ಒಳಗೊಂಡ ಜಾಗತೀಕರಣವೂ ಬೇಕು. ಆದಿವಾಸಿಗಳಲ್ಲಿ ಅಪೌಷ್ಠಿಕತೆ, ಕಾಯಿಲೆಗಳೂ ಹೆಚ್ಚಾಗುತ್ತಿವೆ. ಅವರ ಜಾನಪದ ವೈದ್ಯ ಪದ್ಧತಿಯನ್ನು ಪೋಷಿಸಬೇಕಿದೆ’ ಎಂದರು.
ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ, ವಿಶ್ರಾಂತ ಪ್ರಾಧ್ಯಾಪಕ ಕಂಡಿಕೆರೆ ರಾಮಯ್ಯ ಶ್ರೀಧರ್, ಸಂಶೋಧನಾಧಿಕಾರಿ ಶಿವಕುಮಾರ್ ಸಿ., ಕೃಷ್ಣಮೂರ್ತಿ ಕೆ.ವಿ. ಮಾತನಾಡಿದರು.
ಕ್ಷೇತ್ರ ಸಂಶೋಧಕರಾದ ದಿನೇಶ್ ಕೆ.ಡಿ., ರಾಮಕೃಷ್ಣಯ್ಯ ಡಿ.ಸಿ. ರವಿಕುಮಾರ್, ಮೋಹನ್‌ಕುಮಾರ್, ಕಚೇರಿ ಅಧೀಕ್ಷಕಿ ಎಂ.ವಿ. ನಾಗರತ್ನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.