ADVERTISEMENT

22 ವರ್ಷದಿಂದ ಸಿಗದ ನಿವೇಶನ

ಫಲಾನುಭವಿಗಳು ಕಂಗಾಲು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 5:05 IST
Last Updated 31 ಜನವರಿ 2026, 5:05 IST
22 ವರ್ಷಗಳ ಹಿಂದೆ ಆಶ್ರಯ ಸಮಿತಿಯಿಂದ ಹಕ್ಕು ಪತ್ರ ನೀಡಿದ್ದರೂ ಈವರೆಗೆ ನಿವೇಶನ ಹಸ್ತಾಂತರಿಸಿಲ್ಲ ಎಂದು ಆರೋಪಿಸಿ ಫಲಾನುಭವಿಗಳು ಹುಣಸೂರು ನಾಗರೀಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ ವೇಳೆ ನಗರಸಭೆ ಆಯುಕ್ತೆ ಮಾನಸ ಮಾತನಾಡಿದರು
22 ವರ್ಷಗಳ ಹಿಂದೆ ಆಶ್ರಯ ಸಮಿತಿಯಿಂದ ಹಕ್ಕು ಪತ್ರ ನೀಡಿದ್ದರೂ ಈವರೆಗೆ ನಿವೇಶನ ಹಸ್ತಾಂತರಿಸಿಲ್ಲ ಎಂದು ಆರೋಪಿಸಿ ಫಲಾನುಭವಿಗಳು ಹುಣಸೂರು ನಾಗರೀಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ ವೇಳೆ ನಗರಸಭೆ ಆಯುಕ್ತೆ ಮಾನಸ ಮಾತನಾಡಿದರು   

ಹುಣಸೂರು: 22 ವರ್ಷಗಳ ಹಿಂದೆ ಆಶ್ರಯ ಸಮಿತಿಯಿಂದ ಹಕ್ಕು ಪತ್ರ ನೀಡಿದ್ದರೂ ಈವರೆಗೆ ನಿವೇಶನ ಹಸ್ತಾಂತರಿಸಿಲ್ಲ ಎಂದು ಆರೋಪಿಸಿ ಫಲಾನುಭವಿಗಳು ಹುಣಸೂರು ನಾಗರೀಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

‘ಆರ್ಥಿಕ ದುರ್ಬಲ ಮತ್ತು ಹಿಂದುಳಿದ ವರ್ಗದವರಿಗೆ 1991ರಲ್ಲಿ ಶಾಸಕ ವಿ.ಪಾಪಣ್ಣ ಅವರು ವಿತರಿಸಿದ್ದ 870 ನಿವೇಶನಗಳ ಫಲಾನುಭವಿಗಳಿಗೆ ಹಕ್ಕು ಪತ್ರ ಮಾತ್ರ ಕೈಸೇರಿದ್ದು, ನಗರಸಭೆ ಆಡಳಿತ ಮಂಡಳಿ ಈವರಗೆ ಯಾವುದೇ ಕ್ರಮ ಕೈಗೊಳ್ಳದೆ ಫಲಾನುಭವಿಗಳು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ’ ಎಂದರು.

‘ಇಂದಿನ ಶಾಸಕರು ಪುನರ್‌ ಪರಿಶೀಲನೆ ನಡೆಸಿದ ಬಳಿಕ ನಿವೇಶನ ಗುರುತಿಸಿ ಫಲಾನುಭವಿಗೆ ನೀಡುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದು, ಈ ಹಿಂದಿನ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಮತ್ತು ಅಂದಿನ ಶಾಸಕರು ನೀಡಿದ ಆದೇಶ ಪತ್ರಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಂದಿನ ಟೌನ್‌ ಪ್ಲಾನ್‌ ಸಮ್ಮತಿಸಿ ಫಲಾನುಭವಿಗಳಿಗೆ ನೀಡಿದ ಮೇಲೆ ಯಾವುದೇ ಮರುಪರಿಶೀಲನೆ ಅನಗತ್ಯ. ಫಲಾನುಭವಿಗಳಿಗೆ ಹಕ್ಕುಪತ್ರಕ್ಕೆ ಅನುಗುಣವಾಗಿ ನಿವೇಶನ ಗುರುತಿಸಿ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಅಹಿಂದ ರೈತ ಸಂಘದ ಅಧ್ಯಕ್ಷ ಶಿವಶೇಖರ್‌ ಮಾತನಾಡಿ, ‘ಅಧಿಕಾರಿಗಳಲ್ಲಿ ಅಸ್ಪಷ್ಟತೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡಿ ಮಂಜೂರಾಗಿರುವ ನಿವೇಶನವನ್ನು ಹಸ್ತಾಂತರಿಸಬೇಕು’ ಎಂದು ಒತ್ತಾಯಿಸಿದರು.

‘ನೈಜ ಸಮಸ್ಯೆ ಕುರಿತು ಚರ್ಚಿಸಿ ಕಾನೂನು ವ್ಯಾಪ್ತಿಯೊಳಗೆ ಬಗೆಹರಿಸಿ ಫಲಾನುಭವಿಗಳಿಗೆ ನಿವೇಶನ ನೀಡಬೇಕು, ನಗರಸಭೆ ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿ ಸಮಸ್ಯೆ ಬಗೆಹರಿಯುತ್ತಿದೆ, ಆದರೆ ನಗರಸಭೆ ವ್ಯಾಪ್ತಿಯ ಬಡಾವಣೆಯಲ್ಲಿ ಏಕೆ ಸಮಸ್ಯೆ ಬಗೆಹರಿಯುತ್ತಿಲ್ಲ’  ಎಂದರು.

‘ನಗರಸಭೆ ಆಯುಕ್ತರು ಜನಪರ ಸೇವೆಗೆ ಒತ್ತು ನೀಡದೆ ಉನ್ನತಾಧಿಕಾರಿ ಮತ್ತು ಜನಪ್ರತಿನಿಧಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಜನಸಾಮಾನ್ಯರ ಪರವಾಗಿ ಅಧಿಕಾರಿಗಳು ಆಡಳಿತ ನಡೆಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತನ್ನದೇ ಸ್ವರೂಪ ಪಡೆದುಕೊಳ್ಳಲಿದೆ’ ಎಂದು ಇಂಟೆಕ್‌ ರಾಜು ಹೇಳಿದರು.

‘ನಗರಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದ ಹುಣಸೂರು ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸ್ವಾಮೀಗೌಡ ಅವರು ಅಧಿಕಾರದಲ್ಲಿದ್ದಾಗ ಒಮ್ಮೆಯೂ ಈ ವಿಷಯದ ಬಗ್ಗೆ ಚರ್ಚಿಸಲಿಲ್ಲ, ಚುನಾವಣೆ ಗುರಿಯಾಗಿಟ್ಟುಕೊಂಡು ಸ್ವಾರ್ಥ ರಾಜಕೀಯಕ್ಕೆ ಧ್ವನಿ ಇಲ್ಲದ ಫಲಾನುಭವಿಗಳನ್ನು ಬಲಿಪಶು ಮಾಡಲಾಗಿದೆ’ ಎಂದು ಜೆಡಿಎಸ್ ಮುಖಂಡ ಸತೀಶ್‌ ಕುಮಾರ್ ಆರೋಪಿಸಿದರು.

ಪ್ರತಿಭಟನೆಯಲ್ಲಿ ಸುರೇಶ್‌, ಸನಾವುಲ್ಲಾ, ವೆಂಕಟೇಶ್‌, ಶ್ರೀನಿವಾಸ್‌, ಸೋಮಶೇಖರ್‌, ಸತೀಶ್, ಚಿದಾನಂದ, ಮಹದೇವ್‌, ಸಣ್ಣಯ್ಯ, ಜಗದೀಶ್‌, ಪರಶುರಾಮ್‌, ಶಿವಕುಮಾರ್‌, ಗೋಪಿ, ಸುರೇಶ್‌ ತಿಟ್ಟು, ಸಲೀಂ, ಸಂತೋಷ್‌, ಲಕ್ಷ್ಮಣ್‌, ಪಾಪನಾಯಕ, ಮಯೂರ  ಭಾಗವಹಿಸಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ವಿತರಿಸಿದ ನಿವೇಶನ ಸಂಬಂಧ ಈಗಾಗಲೇ ದಾಖಲೆಗಳ ಪರಿಶೀಲನೆ ನಡೆದಿದೆ. ಈ ನಡುವೆ ಸ್ಥಳಕ್ಕೆ ಭೇಟಿ ನೀಡಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿ ಅಭಿವೃದ್ಧಿಗೆ ಕ್ರಮವಹಿಸಿದ್ದೇವೆ.
ಮಾನಸ ನಗರಸಭೆ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.