ADVERTISEMENT

ಉದಯಗಿರಿ ಪ್ರಕರಣ: ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 13:44 IST
Last Updated 23 ಫೆಬ್ರುವರಿ 2025, 13:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೈಸೂರು: ಇಲ್ಲಿನ ಉದಯಗಿರಿ ಠಾಣೆ ಹಾಗೂ ಪೊಲೀಸರಿಗೆ ಕಲ್ಲೆಸೆತ ಪ್ರಕರಣ ಸಂಬಂಧ ವಿವಿಧ ಸಂಘಟನೆಗಳು ಸೋಮವಾರ (ಫೆ.24) ಪ್ರತ್ಯೇಕವಾಗಿ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿರುವ ನಗರ ಪೊಲೀಸ್‌ ಆಯುಕ್ತರು, ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ನಗರದಾದ್ಯಂತ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಉದಯಗಿರಿ ‍‍ಪೊಲೀಸ್‌ ಠಾಣೆಯ ಸುತ್ತಮುತ್ತ ಫೆ.10ರಂದು ನಡೆದ ಕಲ್ಲೆಸೆತ ಖಂಡಿಸಿ ‘ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ’ಯು ‘ಮೈಸೂರು ಚಲೋ’ ಹಾಗೂ ‘ಬೃಹತ್ ಜನಾಂದೋಲನ ಜಾಗೃತಿ ಸಭೆ’ಯನ್ನು ಸೋಮವಾರ ಬೆಳಿಗ್ಗೆ 11ಕ್ಕೆ ಹಮ್ಮಿಕೊಂಡಿದೆ. ಇದೇ ವೇಳೆ, ‘ಪ್ರಕರಣದಲ್ಲಿ ಮುಸ್ಲಿಂ ಸಮುದಾಯದವರನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿದೆ’ ಎಂದು ಆರೋಪಿಸಿ ದಲಿತ ಮಹಾಸಭಾ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿಯು ‘ಮೌನ ಮೆರವಣಿಗೆ’ ನಡೆಸಲು ಯೋಜಿಸಿ, ಅನುಮತಿ ಕೋರಲಾಗಿತ್ತು. ಅವರಿಗೆ ಅನುಮತಿ ನೀಡಿಲ್ಲ’ ಎಂದು ತಿಳಿಸಿದ್ದಾರೆ.

‘ಸ್ಥಳೀಯ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಈಗಾಗಲೇ ಅನುಮತಿ ನಿರಾಕರಿಸಿ ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಹೀಗಿದ್ದರೂ ಮೆರವಣಿಗೆ ಹಾಗೂ ಸಮಾವೇಶ ನಡೆಸುವುದಾಗಿ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿವೆ. ಆದ್ದರಿಂದ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಹಿತಕರ ಘಟನೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದ್ದಾರೆ.

‘ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ’ಯು ಜೆಎಸ್‌ಎಸ್‌ ಮಹಾವಿದ್ಯಾಪೀಠದ ಬಳಿಯಿಂದ ಹಮ್ಮಿಕೊಂಡಿರುವ ‘ಮೈಸೂರು ಚಲೋ’ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಲಿದ್ದಾರೆ’ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.