ADVERTISEMENT

ಆನ್‌ಲೈನ್‌ ಬದಲಿಗೆ ಗ್ರಂಥಾಲಯ ಬಳಸಿ: ನಟಿ ಉಮಾಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:44 IST
Last Updated 6 ನವೆಂಬರ್ 2025, 4:44 IST
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಚಲನಚಿತ್ರ ನಟಿ ಉಮಾಶ್ರೀ ಉದ್ಘಾಟಿಸಿದರು
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಚಲನಚಿತ್ರ ನಟಿ ಉಮಾಶ್ರೀ ಉದ್ಘಾಟಿಸಿದರು   

ಮೈಸೂರು: ‘ವಿದ್ಯಾರ್ಥಿಗಳು ಆನ್‌ಲೈನ್‌ ಮೊರೆ ಹೋಗುವ ಬದಲಿಗೆ ಗ್ರಂಥಾಲಯಗಳನ್ನು ಬಳಸಿ ಜ್ಞಾನ ವೃದ್ಧಿಸಿಕೊಳ್ಳಬೇಕು’ ಎಂದು ಚಲನಚಿತ್ರ ನಟಿ ಉಮಾಶ್ರೀ ಸಲಹೆ ನೀಡಿದರು.

ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯಕ್ಕೆ ಭವ್ಯ ಇತಿಹಾಸವಿದೆ. ಕುವೆಂಪು, ಗಿರೀಶ್‌ ಕಾರ್ನಾಡ್‌ ಮುಂತಾದ ಹಿರಿಯ ಸಾಹಿತಿಗಳು ಆಳವಾದ ಅಧ್ಯಯನ ಮಾಡಿ ಸಾಹಿತ್ಯಕ್ಕೆ ರೂಪ ನೀಡುತ್ತಿದ್ದರು. ಅದು ಇಂದು ಇಲ್ಲವಾಗಿದೆ. ಮೆದುಳಿಗೆ ಕೆಲಸ ಕೊಡುವುದನ್ನು ಕಡಿಮೆ ಮಾಡಿದ್ದೇವೆ. ಆನ್‌ಲೈನ್‌ ಬದಲಾಗಿ ಗ್ರಂಥಾಲಯ ಬಳಸುವ ಅವಶ್ಯಕತೆ ಇದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಕನ್ನಡ ಭಾಷೆ, ನಾಡಿಗೆ ಸಂಬಂಧಿಸಿದ ಅನೇಕ ಹೋರಾಟಗಳ‌ ಮೂಲಕ ನಾವು ಉಳಿದುಕೊಂಡಿದ್ದೇವೆ. ಹಿರಿಯರ ಹೋರಾಟ ಹಾಗೂ ಶ್ರಮವನ್ನು ಸ್ಮರಿಸಬೇಕು. ಮೈಸೂರು ರಾಜರ ಕಾಲದಿಂದಲೂ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದು, ಇಲ್ಲಿ ಸಂಗೀತ, ನೃತ್ಯ, ಸಂಸ್ಕೃತಿಗೆ ಪ್ರೋತ್ಸಾಹ ದೊರೆಯುತ್ತಿದೆ. ಈ ವಾತಾವರಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಉನ್ನತ ಶಿಕ್ಷಣ ಎಲ್ಲೆಡೆ, ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಮುಕ್ತ ವಿಶ್ವವಿದ್ಯಾಲಯ ಆರಂಭವಾಗಿದೆ. ಇದೇ ಕಾರಣದಿಂದ ಎಸ್‌ಎಸ್‌ಎಲ್‌ಸಿ ಓದಿದ್ದ ನಾನು ಇಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆಯುವಂತಾಯಿತು. ವಯಸ್ಸಿನ ಕಾರಣಕ್ಕೆ ವಿದ್ಯೆ ನಿಲ್ಲಬಾರದು. ವಿದ್ಯೆಗೆ ಸಾವಿಲ್ಲ, ಜ್ಞಾನಕ್ಕೆ ಕೊನೆಯಿಲ್ಲ ಎಂಬಂತೆ ಜೀವನದುದ್ದಕ್ಕೂ ಕಲಿಕೆಗೆ ಮಹತ್ವ ನೀಡಬೇಕು’ ಎಂದು ಹೇಳಿದರು. 

ಜಾನಪದ ವಿದ್ವಾಂಸ ಪ್ರೊ.ಪಿ.ಕೆ.ರಾಜಶೇಖರ, ಕುಲಸಚಿವ ಪ್ರೊ.ಎಸ್‌.ಕೆ.ನವೀನ್‌ ಕುಮಾರ್‌, ಶೈಕ್ಷಣಿಕ ಡೀನ್‌ ಪ್ರೊ.ಎಂ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ.ಎಸ್‌.ನಿರಂಜನ್‌ ರಾಜ್, ಅಧ್ಯಯನ ಕೇಂದ್ರದ ಡೀನ್‌ ಪ್ರೊ.ಎನ್‌.ಆರ್‌. ಚಂದ್ರೇಗೌಡ ಇದ್ದರು.

2 ಗಂಟೆ ತಡವಾಗಿ ಆರಂಭ: ವೇದಿಕೆ ಕಾರ್ಯಕ್ರಮವನ್ನು ಬೆಳಿಗ್ಗೆ 9.45ಕ್ಕೆ ನಿಗದಿಪಡಿಸಲಾಗಿತ್ತು. ಆದರೆ 2 ಗಂಟೆ ತಡವಾಗಿ ಆರಂಭವಾಯಿತು. ಹಲವು ಪ್ರೇಕ್ಷಕರು ಕಾದು ವಾಪಸ್‌ ತೆರಳಿದರು.

11.25ಕ್ಕೆ ಜಾನಪದ ಕಲಾತಂಡಗಳೊಂದಿಗೆ ಅತಿಥಿಗಳನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ನಗರದ ಜ್ಞಾನೋದಯ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ನಂತರ ಸಭಾ ಕಾರ್ಯಕ್ರಮ ಆರಂಭವಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.