
ಮೈಸೂರು: ‘ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸೂಕ್ತ ಆದ್ಯತೆ ದೊರೆತಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಯೋಜನಾ ಆಯೋಗದ ಸಂದರ್ಶಕ ಮುಖ್ಯಸ್ಥ ರವಿ ಭಂಡಾರಿ ಹೇಳಿದರು.
ನಗರದ ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ‘ಕೇಂದ್ರ ಬಜೆಟ್ 2026–27 ಒಂದು ಅವಲೋಕನ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ ಮೂಲತಃ ಕೃಷಿ ಆಧಾರಿತ ರಾಷ್ಟ್ರವಾಗಿದ್ದು, ಶೇ 54ರಷ್ಟು ಜನರು ಈ ಕಸುಬನ್ನು ಅವಲಂಬಿಸಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಆದ್ಯತೆಯನ್ನು ಬಜೆಟ್‌ನಲ್ಲಿ ಕೊಟ್ಟಿಲ್ಲ. ಭವಿಷ್ಯದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆಗೆ ಅಗತ್ಯವಾದ ಆಹಾರದ ಪೂರೈಕೆಗೆ ಹೆಚ್ಚು ಒತ್ತು ನೀಡದಿರುವುದು ವಿಷಾದದ ಸಂಗತಿ’ ಎಂದು ವಿಶ್ಲೇಷಿಸಿದರು.
‘ಪ್ರಸ್ತುತ ಜಾಗತಿಕ ಮಟ್ಟದಲ್ಲಿ ದೇಶವು ಮೊದಲ ಸ್ಥಾನದತ್ತ ಮುಖ ಮಾಡುತ್ತಿರುವುದು ಖುಷಿಯ ವಿಚಾರ. ಆದರೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಯ ದೃಷ್ಟಿಯಿಂದ ಸಾರ್ವಜನಿಕ ಸರಕುಗಳ ಉತ್ಪಾದನೆಗೆ ಮತ್ತು ಅದನ್ನು ಕೊಳ್ಳುವ ಜನಸಾಮಾನ್ಯರ ಕೌಟುಂಬಿಕ ಆದಾಯವನ್ನು ಹೆಚ್ಚಿಸುವುದಕ್ಕೆ ಈ ಬಾರಿಯ ಬಜೆಟ್ ಆದ್ಯತೆ ನೀಡಿಲ್ಲ’ ಎಂದು ಹೇಳಿದರು.
‘ನಿಜವಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧನೆ ಆಗಬೇಕಾದರೆ ಮನುಷ್ಯಕೇಂದ್ರತ ಬಜೆಟ್ ಮಂಡನೆ ಆಗಬೇಕು. ಆಗ ಮಾತ್ರ ದೇಶದಲ್ಲಿ ನಿರುದ್ಯೋಗ, ಬಡತನ, ಅಸಮಾನತೆ, ಅಪೌಷ್ಟಿಕತೆ ಮೊದಲಾದ ಸಮಸ್ಯೆಗಳನ್ನು ನಾಶಪಿಡಿಸಿ ಪ್ರಗತಿ ಸಾಧಿಸಬಹುದು’ ಎಂದು ಪ್ರತಿಪಾದಿಸಿದರು.
ಅಂತಿಮ ಬಿಎ ವಿದ್ಯಾರ್ಥಿಗಳಾದ ಕಲ್ಯಾಣ್‌ಕುಮಾರ್ ಮತ್ತು ಸಂಜೀತ್ ಸಂವಾದ ನಡೆಸಿಕೊಟ್ಟರು.
ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವೆಂಕಟಲಕ್ಷ್ಮಿ ಎಂ.ಎನ್., ಕಾಲೇಜಿನ ಶೈಕ್ಷಣಿಕ ನಿರ್ವಹಣಾಧಿಕಾರಿ ಎಸ್.ಆರ್. ರಮೇಶ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪುಷ್ಪಾರಾಣಿ ಪಿ.ಜಿ., ಅಧ್ಯಾಪಕರಾದ ಸಿದ್ದಪ್ಪ ಆರ್. ಹಾಗೂ ಚಲುವೇಗೌಡ ಎಸ್.ಎಂ. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.