ADVERTISEMENT

ಬಜೆಟ್ ವಿಮರ್ಶಿಸದೆ ವಿರೋಧ; ಸಮಂಜಸವಲ್ಲ: ಸಂದೇಶ್ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:39 IST
Last Updated 2 ಫೆಬ್ರುವರಿ 2025, 14:39 IST

ಮೈಸೂರು: ‘ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ವಿಮರ್ಶಿಸದೆ, ವಿರೋಧಿಸುವುದು ಸಮಂಜವಲ್ಲ’ ಎಂದು ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಹೇಳಿದ್ದಾರೆ.

‘ಪ್ರಧಾನಿ‌ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಪರ ಬಜೆಟ್ ಮಂಡಿಸಿದೆ. ಈ ವರ್ಷವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಈ ಸಂಬಂಧ ಪರ ವಿರೋಧಗಳ ಹೇಳಿಕೆ ಕೇಳಿ ಬಂದಿದೆ. ಸಾಮಾನ್ಯವಾಗಿ ಸ್ವಪಕ್ಷೀಯರು ಬಜೆಟ್‌ ಹೊಗಳುವುದು, ಪ್ರತಿಪಕ್ಷ ತೆಗಳುವುದು ಸಾಮಾನ್ಯ. ಆದರೆ, ವಿರೋಧಿಸುವವರು ಬಜೆಟ್‌ ಪರಾಮರ್ಶಿಸಿ ಪ್ರತಿಕ್ರಿಯಿಸಬೇಕು. ಅದು ಆರೋಗ್ಯಕರ ಬೆಳವಣಿಗೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸ್ವಾತಂತ್ರ್ಯ ಬಂದ ಮೇಲೆ ದೇಶವನ್ನು ಆರು ದಶಕಗಳಿಗೂ ಹೆಚ್ಚು ಕಾಲ ಆಳಿದ್ದ ಕಾಂಗ್ರೆಸ್, ಕಳೆದ ಒಂದು ದಶಕದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅಭಿವೃದ್ಧಿ ಪಥ ಗಮನಿಸಬೇಕು’ ಎಂದಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆ ಮೂಲಕ ಜನರ ಬದುಕನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿದೆ. ಈ ಸಾಲಿನ ಬಜೆಟ್‌ನಲ್ಲೂ ರೈತರು, ಮಹಿಳೆಯರು, ಯುವಕರಿಗೆ ನೆರವಾಗುವ ಯೋಜನೆ ಅನುಷ್ಠಾನಗೊಳಿಸಿದೆ. ₹12 ಲಕ್ಷವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಐತಿಹಾಸಿಕ ನಿರ್ಣಯ. ಇಂತಹ ಯೋಜನೆ ಕಾಂಗ್ರೆಸ್ ಅವಧಿಯಲ್ಲಿ ಯಾಕೆ ಜಾರಿಗೆ ತರಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಎಲ್ಲ ವರ್ಗದವರ ಪಾಲಿಗೆ ಈ ಬಜೆಟ್ ವರದಾನವಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.