ADVERTISEMENT

ಆರೋಗ್ಯ ಎಲ್ಲರಿಗೂ ಸಿಗಲಿ; ಪ್ರೊ.ಉಷಾ ಮಂಜುನಾಥ್

ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಹೆಚ್ಚಿಸುವಿಕೆ: ಸಮಸ್ಯೆ ಮತ್ತು ಸವಾಲು ಕುರಿತ ಕಾರ್ಯಗಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:59 IST
Last Updated 18 ಜೂನ್ 2019, 14:59 IST
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ‘ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಹೆಚ್ಚಿಸುವಿಕೆ: ಸಮಸ್ಯೆ ಮತ್ತು ಸವಾಲು’ ಕುರಿತ ಕಾರ್ಯಗಾರದಲ್ಲಿ ಐಎಚ್‍ಎಂಆರ್ ನಿರ್ದೇಶಕಿ ಪ್ರೊ.ಉಷಾ ಮಂಜುನಾಥ್ ಮಾತನಾಡಿದರು. ಡಾ.ಡಿ.ಸಿ.ನಂಜುಂಡ, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಡಾ.ಎಂ.ಎಸ್.ಬಸವರಾಜು ಇದ್ದಾರೆ
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ‘ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಹೆಚ್ಚಿಸುವಿಕೆ: ಸಮಸ್ಯೆ ಮತ್ತು ಸವಾಲು’ ಕುರಿತ ಕಾರ್ಯಗಾರದಲ್ಲಿ ಐಎಚ್‍ಎಂಆರ್ ನಿರ್ದೇಶಕಿ ಪ್ರೊ.ಉಷಾ ಮಂಜುನಾಥ್ ಮಾತನಾಡಿದರು. ಡಾ.ಡಿ.ಸಿ.ನಂಜುಂಡ, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಡಾ.ಎಂ.ಎಸ್.ಬಸವರಾಜು ಇದ್ದಾರೆ   

ಮೈಸೂರು: ‘ಆರೋಗ್ಯ ಎಲ್ಲರಿಗೂ ಸಿಗುವಂತಾಗಬೇಕು’ ಎಂದು ಬೆಂಗಳೂರಿನ ಆರೋಗ್ಯ ನಿರ್ವಹಣಾ ಸಂಶೋಧನಾ ಕೇಂದ್ರದ (ಐಎಚ್‍ಎಂಆರ್) ನಿರ್ದೇಶಕಿ ಪ್ರೊ.ಉಷಾ ಮಂಜುನಾಥ್ ಹೇಳಿದರು.

ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಹೆಚ್ಚಿಸುವಿಕೆ; ಸಮಸ್ಯೆ ಮತ್ತು ಸವಾಲು’ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ‘2030ರೊಳಗೆ ದೇಶದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕೊಡುವ ದಿಸೆಯಲ್ಲಿ ಎಲ್ಲರೂ ಹೆಜ್ಜೆ ಹಾಕಬೇಕಿದೆ’ ಎಂದರು.

‘ಆಯುಷ್ಮಾನ್‌ ಭಾರತ್ ಅತ್ಯುತ್ತಮ ಆರೋಗ್ಯ ಯೋಜನೆ. ಈ ಯೋಜನೆಯಡಿ ದೇಶದ 50 ಕೋಟಿ ಜನರಿಗೆ ಆರೋಗ್ಯದ ಅನುಕೂಲ ಲಭಿಸಿದೆ. ಯೋಜನೆ ಅನುಷ್ಠಾನದ ಸಂದರ್ಭ ಸಣ್ಣ ಪುಟ್ಟ ಸಮಸ್ಯೆಗಳಿರಬಹುದು. ಮುಂದಿನ ದಿನಗಳಲ್ಲಿ ಇವೆಲ್ಲವೂ ಪರಿಹಾರವಾಗಿ ಜನರಿಗೆ ಅನುಕೂಲ ಸಿಗಲಿದೆ’ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರದ ಡಾ.ಎಂ.ಎಸ್.ಬಸವರಾಜು ಮಾತನಾಡಿ ‘ಪ್ರಾಥಮಿಕ ಹಂತದಲ್ಲೇ ರೋಗಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬೇಕಿದೆ. ಈ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದರೆ, ಮುಂದಿನ ಹಂತದ ತುರ್ತು ಚಿಕಿತ್ಸೆಗಳಿಗಾಗಿ ರೋಗಿಗಳನ್ನು ಮತ್ತೊಂದೆಡೆಗೆ ಕಳುಹಿಸಿಕೊಡುವ ಅಗತ್ಯವಿರಲ್ಲ’ ಎಂದು ಹೇಳಿದರು.

‘ಕಿಮೋ ಥೆರಪಿ, ಕ್ಯಾನ್ಸರ್ ಥೆರಪಿಗಳ ಮೂಲಕ ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಹಚ್ಚಿ ಗುಣಪಡಿಸುವ ಕೆಲಸ ನಡೆದಿರುವುದು ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಬೆಳವಣಿಗೆ. ಶುದ್ಧ ನೀರು ಮತ್ತು ಆಹಾರ ಪದ್ಧತಿಯ ಕ್ರಮವಿಲ್ಲದಿದ್ದುದರಿಂದ ರಕ್ತದೊತ್ತಡ, ಕಿಡ್ನಿ ಸಮಸ್ಯೆಗಳು ಹೆಚ್ಚಿವೆ’ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀತಿ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ವಿರಚಿತ ಸೂಜಿದಾರ, ಅಂಚಿನ ಸಮುದಾಯಗಳ ಸಂಸ್ಕೃತಿಗಳು ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.