ಮೈಸೂರು: ಸಮಾಜ ಹೇರುವ ಕಟ್ಟುಪಾಡು, ಪುರುಷ ಪ್ರಧಾನ ವ್ಯವಸ್ಥೆಯ ಕಾರ್ಮೋಡವನ್ನು ತೂರಿ ಹೊರಹೊಮ್ಮುವ ಬೆಳಕಿನಂತೆ ಹೆಣ್ಣಿನ ಅಂತಸತ್ವವನ್ನು, ಸಾಮರ್ಥ್ಯವನ್ನು ವರ್ಣ ಚಿತ್ರಗಳ ಮೂಲಕ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ) ವಿದ್ಯಾರ್ಥಿನಿ ಡಿ.ಪೃಥ್ವಿ ಅನಾವರಣಗೊಳಿಸಿದ್ದಾರೆ.
ಜಗತ್ತನ್ನೇ ಆವರಿಸಿ ಕುಳಿತು, ಭೂಮಿ ಸೇರಿದಂತೆ ಎಲ್ಲ ಗ್ರಹಗಳನ್ನು ಸೂಜಿ, ದಾರದಲ್ಲಿ ಪೋಣಿಸುವ ಮಹಾಶಕ್ತಿಯಾಗಿ ಇಲ್ಲಿನ ವರ್ಣ ಚಿತ್ರ ‘ಹೋಮ್ ಮೇಕರ್’ನಲ್ಲಿ ಹೆಣ್ಣು ಅವತರಿಸಿದ್ದಾಳೆ. ವಿಭಿನ್ನ ಪಾತ್ರಗಳ ನಡುವೆ ತನ್ನದೇ ಅಭಿವ್ಯಕ್ತಿಯನ್ನು ಪ್ರದರ್ಶಿಸುವ ಹುಡುಗಿಯಾಗಿ ‘ಅಪಾರ್ಟ್’ ಚಿತ್ರ ಗಮನ ಸೆಳೆಯುತ್ತದೆ. ಎಲ್ಲದಕ್ಕೂ ಸೈ ಎಂಬ ಸಮರ್ಥೆಯಾಗಿ ಮಹಿಳೆಯು ಅರಳಿದ್ದಾಳೆ.
ನಗರದ ಕಿರು ರಂಗಮಂದಿರದಲ್ಲಿ ‘ಸಂಚಲನ’ ಮೈಸೂರು ತಂಡದಿಂದ ಡಿ.5ರವರೆಗೂ ಆಯೋಜಿಸಿರುವ ಮಹಿಳಾ ನಾಟಕೋತ್ಸವಕ್ಕೆ ಪೂರಕವಾಗಿ ಪೃಥ್ವಿ ಅವರ ‘ಚಿನ್ ಅಪ್’ ಹೆಸರಿನ ವರ್ಣ ಚಿತ್ರಗಳ ಮಾಲೆಯನ್ನು ಪ್ರದರ್ಶನಕ್ಕಿರಿಸಲಾಗಿದೆ. ಸ್ತ್ರೀಪ್ರಧಾನ ಚಿತ್ರಗಳು ಹಲವು ಕಥೆಗಳೊಂದಿಗೆ ಚಿಂತನೆಗೆ ದೂಡುತ್ತವೆ.
ಕ್ರೈ ಆಫ್ ಬ್ಲೂ, ದಿ ಲೈಟ್, ಪೇಂಟ್ ಯುವರ್ ಟೋ ನೈಲ್ಸ್ ರೆಡ್, ಅಸ್, ಶಿ, ಯೂ ಅಂಡ್ ಮಿ, ಡಿಪಿಕ್ಷನ್, ಸಾಫ್ಟ್ ಆ್ಯಸ್ ವಾಟರ್ ಹಾರ್ಡ್ ಆ್ಯಸ್ ಫೈರ್, ವಿಂಗ್ಸ್ ಆಫ್ ಮೈನ್ ಫೀಚರ್ಸ್ ಆಫ್ ಅದರ್, ಅಬುಂಡೆನ್ಸ್, ದಿ ಬಾಯ್ಲಿಂಗ್ ಕ್ಲೌಡ್ಸ್ ಹೆಸರಿನಲ್ಲಿ ‘ಅಕ್ರಾಲಿಕ್ ಆನ್ ಕ್ಯಾನ್ವಸ್’ ಮಾಧ್ಯಮದಲ್ಲಿ ಈ ‘ಫಿಗರೇಟಿವ್’ ಚಿತ್ರಗಳು ರೂಪುಗೊಂಡಿವೆ.
‘ಕಾವಾದ ಪೇಂಟಿಂಗ್ ವಿಭಾಗದ ಅಂತಿಮ ವರ್ಷದ 7ನೇ ಸೆಮ್‌ನಲ್ಲಿದ್ದೇನೆ. ಕುವೆಂಪುನಗರದಲ್ಲಿ ನೆಲೆಸಿದ್ದು, ಒಮ್ಮೆ ತಂಗಿಯೊಂದಿಗೆ ಸುತ್ತಾಡಲು ತೆರಳಿದಾಗ ಕಂಡ ಅಸೂಕ್ಷ್ಮ ವಾತಾವರಣವು ಕಾಡಿತು. ಸವಾಲುಗಳ ನಡುವೆಯೂ ಹೆಣ್ಣು ತಲೆ ಎತ್ತಿ ನಿಲ್ಲಬಲ್ಲಳೆಂಬ ಸಂದೇಶ ನೀಡುವುದೇ ಉದ್ದೇಶ’ ಎಂದು ಪೃಥ್ವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘2 ತಿಂಗಳಿಂದ 11 ಪೇಂಟಿಂಗ್‌ಗಳನ್ನು ರಚಿಸಿದ್ದೇನೆ. ಒಟ್ಟು 17 ಪೇಂಟಿಂಗ್‌ಗಳನ್ನು ಪ್ರದರ್ಶನಕ್ಕೆ ಇರಿಸಿದ್ದೇನೆ. ಭವಿಷ್ಯದಲ್ಲಿ ‘ಪೇಂಟಿಂಗ್’ ವಿಭಾಗದಲ್ಲೇ ಮಾಸ್ಟರ್ಸ್ ಮಾಡಲಿದ್ದೇನೆ’ ಎಂದರು.
ಡಿ.5ರವರೆಗೆ ಬೆಳಿಗ್ಗೆ 11ರಿಂದ ರಾತ್ರಿ 8.30ರವರೆಗೆ ಪ್ರದರ್ಶನ ‘ಅಕ್ರಾಲಿಕ್ ಆನ್ ಕ್ಯಾನ್ವಸ್’ನಲ್ಲಿನ ‘ಫಿಗರೇಟಿವ್’ ಚಿತ್ರಗಳು ಮಹಿಳೆಗೆ ಆದ್ಯತೆ, ಚಿತ್ರ ಸರಣಿಯ ಉದ್ದೇಶ
ಪ್ರತಿ ಪೇಂಟಿಂಗ್‌ಗೂ 3 ದಿನಗಳ ಸಮಯ ಹಿಡಿದಿದೆ. ವೈಯಕ್ತಿಕವಾಗಿ ಇದು ಪ್ರಥಮ ಪ್ರದರ್ಶನ ಜನರ ಅಭಿಪ್ರಾಯಕ್ಕೆ ಕಾತರಳಾಗಿದ್ದೇನೆಡಿ.ಪೃಥ್ವಿ ಕಾವಾ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.