ADVERTISEMENT

ಮೈಸೂರು ವಿ.ವಿ: ದೂರ ಶಿಕ್ಷಣ ಕೋರ್ಸಿಗೆ 33 ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 18:03 IST
Last Updated 26 ಅಕ್ಟೋಬರ್ 2018, 18:03 IST
ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧ
ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧ   

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಹೊಸದಾಗಿ ಆರಂಭಿಸಿರುವ 11 ದೂರ ಶಿಕ್ಷಣ ಕೋರ್ಸುಗಳಿಗೆ 33 ಅರ್ಜಿಗಳು ಮಾತ್ರ ಬಂದಿವೆ!

ರಾಜ್ಯದ ವಿವಿಧ ವಿ.ವಿ.ಗಳ ಪೈಕಿ ಮೈಸೂರು ವಿ.ವಿ.ಯೂ ದೂರಶಿಕ್ಷಣ ಕೋರ್ಸುಗಳನ್ನು ನಡೆಸುತ್ತಿದೆ. 1980ರಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದ ಮೈಸೂರು ವಿ.ವಿ.ಯು, 1996ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ದೂರ ಶಿಕ್ಷಣ ಕೋರ್ಸ್‌ಗಳನ್ನು ನಡೆಸುವುದನ್ನು ನಿಲ್ಲಿಸಿತ್ತು. ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವು ದೂರಶಿಕ್ಷಣ ಕೋರ್ಸುಗಳನ್ನು ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಿತ್ತು.

ವಿ.ವಿ.ಗೆ ಅ. 20ರೊಳಗೆ ಕೋರ್ಸುಗಳಿಗೆ ನೋಂದಣಿ ಮಾಡಿಕೊಳ್ಳುವಂತೆ ಯುಜಿಸಿ ಗಡುವು ನೀಡಿತ್ತು. ಆದರೆ, ಮೈಸೂರು ವಿ.ವಿ.ಗೆ ಸಿಕ್ಕ ಕಾಲಾವಕಾಶ ಮಾತ್ರ ತೀರಾ ಕಡಿಮೆ. ಅ. 3ರಂದು ಮಾನ್ಯತೆ ನೀಡಿದ್ದ ಯುಜಿಸಿಯು ಕೇವಲ 17 ದಿನಗಳನ್ನು ನೀಡಿತ್ತು. ಈ ಅವಧಿಯಲ್ಲಿ ರಜಾದಿನಗಳನ್ನು ಕಳೆದು ಕಡಿಮೆ ಕಾಲಾವಕಾಶ ಅರ್ಜಿ ಸಲ್ಲಿಸಲು ಸಿಕ್ಕಿತ್ತು. ಆದರೆ, ಮೈಸೂರು ವಿ.ವಿ.ಯು ಇಷ್ಟು ಕಡಿಮೆ ಅರ್ಜಿಗಳನ್ನು ನಿರೀಕ್ಷಿಸಿರಲಿಲ್ಲ.

ADVERTISEMENT

ರಾಜ್ಯದ ಎಲ್ಲ ವಿ.ವಿ.ಗಳಿಗಿಂತ ಭಿನ್ನವಾಗಿ ಮೈಸೂರು ವಿ.ವಿ.ಯಲ್ಲಿ ದೂರಶಿಕ್ಷಣ ಕೋರ್ಸುಗಳನ್ನು ಸೆಮಿಸ್ಟರ್‌ ಪದ್ಧತಿಯಲ್ಲಿ ಜಾರಿಗೆ ತಂದಿದ್ದರೂ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಸೋತಿದೆ. ಇದರ ಜತೆಗೆ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ (ಸಿಬಿಸಿಎಸ್) ಅಳವಡಿಸಿಕೊಂಡಿರುವುದೂ ವಿಶೇಷವಾಗಿತ್ತು.

ದೂರಶಿಕ್ಷಣಕ್ಕಾಗಿ 11 ಕೋರ್ಸುಗಳಿಗೆ ವಿ.ವಿ ಅರ್ಜಿ ಆಹ್ವಾನಿಸಿತ್ತು. ಆದರೆ, ವಿ.ವಿ.ಯು 25 ಕೋರ್ಸುಗಳಿಗೆ ಮಾನ್ಯತೆ ಪಡೆದಿದೆ. ಅರ್ಜಿ ಆಹ್ವಾನಿಸದ ಕೋರ್ಸುಗಳೆಲ್ಲವೂ ಬಿ.ಎ ಕೋರ್ಸುಗಳಾಗಿದ್ದು,ಏಕ ವಿಷಯ ಪದವಿ ಕೋರ್ಸುಗಳನ್ನು ನಡೆಸಲು ರಾಜ್ಯದಲ್ಲಿ ಅವಕಾಶವಿಲ್ಲದ ಕಾರಣ, ಯುಜಿಸಿಗೆತ್ರಿ ವಿಷಯ ಪದವಿ ಕೋರ್ಸು ನಡೆಸಲು ಅನುಮತಿ ಕೋರಲು ವಿ.ವಿ ನಿರ್ಧರಿಸಿತ್ತು.

ಕಾಲಾವಕಾಶಕ್ಕೆ ಕೋರಿಕೆ‌

ಅರ್ಜಿಗಳು ಕಡಿಮೆ ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕರಿಸಲು ಹೆಚ್ಚಿನ ಕಾಲಾವಕಾಶ ಕೋರಿ ಯುಜಿಸಿಗೆ ಮೈಸೂರು ವಿಶ್ವವಿದ್ಯಾಲಯ ಅರ್ಜಿ ಸಲ್ಲಿಸಲಿದೆ.

‘ಪ್ರಚಾರದ ಅಭಾವ, ಕಾಲಾವಕಾಶ ಕಡಿಮೆ ಇದ್ದ ಕಾರಣದಿಂದ ಹೆಚ್ಚು ಅರ್ಜಿಗಳು ಬಂದಿಲ್ಲ. ಹಾಗಾಗಿ, ಹೆಚ್ಚಿನ ಕಾಲಾವಕಾಶ ಕೋರುತ್ತಿದ್ದೇವೆ’ ಎಂದು ಕುಲಸಚಿವ ಪ್ರೊ.ಆರ್‌.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.