ಮೈಸೂರು: ‘ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಉಲ್ಬಣಿಸಿದ್ದು, ಸರ್ಕಾರ ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಚಳವಳಿ ನಡೆಸಲಾಗುವುದು’ ಎಂದು ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
‘ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಇದೆ. ಸರ್ಕಾರ ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸಿದರೆ, ಕೇಂದ್ರ ಸರ್ಕಾರವೂ ಸಹ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಇದರಿಂದ ರೈತರ ಸಮಸ್ಯೆ ಉಲ್ಬಣವಾಗುತ್ತಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
‘ರೈತರು ಯೂರಿಯಾ ಮೇಲೆಯೇ ಅವಲಂಬಿತರಾಗಿದ್ದಾರೆ. ಯುದ್ಧದ ಕೊರತೆಯಿಂದ ಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳುತ್ತಾರೆ. ಆದರೆ ಕಾಳಸಂತೆಯಲ್ಲಿ ಮಾತ್ರ ದುಬಾರಿ ದರಕ್ಕೆ ಮಾರಾಟ ನಡೆದಿದೆ. ಮಾಮೂಲಿ ದರಕ್ಕಿಂತ ಮೂರು ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಅಧಿಕಾರ ಕೃಷಿ ಇಲಾಖೆ, ಜಿಲ್ಲಾಧಿಕಾರಿ ಬಳಿ ಇದ್ದು, ಕ್ರಮ ಕೈಗೊಳ್ಳದೆಯೇ ಸುಮ್ಮನಾಗಿದ್ದಾರೆ’ ಎಂದು ದೂರಿದರು.
‘ಯೂರಿಯಾವನ್ನು ಫ್ಲೈವುಡ್ ತಯಾರಿಕೆಗೆ ಬಳಸುತ್ತಾರೆ. ಫ್ಲೈವುಡ್‌ಗೆ ಬಳಸಲು ಯೂರಿಯಾವನ್ನು ಖರೀದಿಸಬೇಕಾದರೆ ಕಮರ್ಷಿಯಲ್ ದರದಲ್ಲಿ ಖರಿದಿಸಬೇಕು. ಹೀಗಾಗಿ ರೈತರಿಗೆ ಸಿಗಬೇಕಾದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ’ ಎಂದು ವಿವರಿಸಿದರು.
‘ಈಚಿನ ದಿನಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಲೇ ಇದೆ. ಅರಣ್ಯ ಸಚಿವರು ಕೇವಲ ದಸರಾ ಆನೆ ಸ್ವಾಗತ ಮಾಡಿ ಹೋಗುವುದಲ್ಲ, ಜನರ ಸಮಸ್ಯೆ ಆಲಿಸಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡರಾದ ನೇತ್ರಾವತಿ, ಪಿ. ಮರಂಕಯ್ಯ, ವಿಜೇಂದ್ರ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ಚಂದ್ರಶೇಖರ್ ಮೈದುನಳ್ಳಿ ಮಹೇಶ್, ವೆಂಕಟೇಶ್ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.