ADVERTISEMENT

ಅಂಬೇಡ್ಕರ್‌ ಚಿತ್ರಪಟಕ್ಕೆ ಸೀಮಿತವಾಗದೆ ಇರಲಿ

ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST
ಮೈಸೂರಿನಲ್ಲಿ ಅಖಿಲ ಭಾರತ ಎಸ್ಸಿ, ಎಸ್ಟಿ, ಒಬಿಸಿ ಬ್ಯಾಂಕ್‌ ಉದ್ಯೋಗಿಗಳ ಸಂಘವು ಹಮ್ಮಿಕೊಂಡಿದ್ದ ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು ಮಾತನಾಡಿದರು
ಮೈಸೂರಿನಲ್ಲಿ ಅಖಿಲ ಭಾರತ ಎಸ್ಸಿ, ಎಸ್ಟಿ, ಒಬಿಸಿ ಬ್ಯಾಂಕ್‌ ಉದ್ಯೋಗಿಗಳ ಸಂಘವು ಹಮ್ಮಿಕೊಂಡಿದ್ದ ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು ಮಾತನಾಡಿದರು   

ಮೈಸೂರು: ಅಂಬೇಡ್ಕರ್‌ ಕೇವಲ ಚಿತ್ರಪಟದಲ್ಲಿಟ್ಟು ಪೂಜಿಸುವುದಕ್ಕೆ ಸೀಮತವಾಗದಿರಲಿ. ಅವರ ಆಶಯಗಳನ್ನು ಪಾಲಿಸುವ ಮೂಲಕ ಗೌರವ ಸಲ್ಲಿಸುವಂತಾಗಬೇಕು ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಲಹೆ ನೀಡಿದರು.

ಅಖಿಲ ಭಾರತ ಎಸ್ಸಿ, ಎಸ್ಟಿ, ಒಬಿಸಿ ಬ್ಯಾಂಕ್‌ ಉದ್ಯೋಗಿಗಳ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಅವರ ಫೋಟೊವನ್ನು ದೊಡ್ಡದಾಗಿ ಮುದ್ರಿಸಿ, ಅದನ್ನು ಚೌಕಟ್ಟಿನಲ್ಲಿ ಅಂದ ಮಾಡಿ ಇಟ್ಟರೆ ಸಾಲದು. ಅವರು ತಮ್ಮ ಜೀವಿತದ ಉದ್ದಕ್ಕೂ ನಡೆಸಿದ ಹೋರಾಟ, ನಂಬಿಕೊಂಡು ಬಂದ ಆಶಯಗಳನ್ನು ಅರಿತುಕೊಳ್ಳಬೇಕು. ಅವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಎಸ್ಸಿ, ಎಸ್ಟಿ, ಒಬಿಸಿ ಒಂದು ಅಂಗಳದಲ್ಲಿ ಸೇರುವ ವರ್ಗಗಳು. ಈ ವರ್ಗಗಳು ತಮ್ಮ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಮುದಾಯಗಳು ಜಾಗೃತಗೊಂಡರೆ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿಯಾಗುವುದು ಸಾಧ್ಯವಾಗುವುದು ಎಂದು ಅವರು ವಿಶ್ಲೇಷಿಸಿದರು.

‘ಅಂಬೇಡ್ಕರ್‌ ಮಹಾನ್‌ ಮಾನವತಾವಾದಿ. ಸಮಾನತೆಯ ಪ್ರತಿಷ್ಠಾಪನೆ ಅವರ ಆಶಯಗಳಲ್ಲಿ ಒಂದಾಗಿತ್ತು. ಅದರ ಪ್ರತಿಫಲನವನ್ನು ನಾವು ಸಂವಿಧಾನದಲ್ಲಿ ನೋಡಲು ಸಾಧ್ಯ. ಪ್ರತಿಯೊಬ್ಬರ ಅಭಿವೃದ್ಧಿಯೂ ನ್ಯಾಯಬದ್ಧವಾಗಿ ಆಗಬೇಕು ಎನ್ನುವುದು ಅವರ ಆಶಯವಾಗಿತ್ತು. ಅದಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು’ ಎಂದು ಸ್ಮರಿಸಿದರು.

‘ಅಂಬೇಡ್ಕರ್‌ ಕೇವಲ ಸಮಾನವತಾವಾದಿ ಮಾತ್ರವೇ ಅಲ್ಲ. ಅವರು ಶ್ರೇಷ್ಠ ಆರ್ಥಿಕ ತಜ್ಞರೂ ಆಗಿದ್ದರು. ಜತೆಗೆ, ಕೃಷಿಯನ್ನೂ ಶಾಸ್ತ್ರಬದ್ಧವಾಗಿ ಅರ್ಥಮಾಡಿಕೊಂಡಿದ್ದರು. ಹಾಗಾಗಿ, ದೇಶದುದ್ದಕ್ಕೂ ಅನೇಕ ಕೃಷಿ – ವಾಣಿಜ್ಯ ಸಂಸ್ಥೆಗಳು ತೆರೆಯುವಂತೆ ಮಾಡಿದರು. ಇಂದು ಅವರಿಂದಾಗಿ ಹಲವು ಕುಟುಂಬಗಳು ಹಸನಾಗುವುದು ಸಾಧ್ಯವಾಯಿತು’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು ಮಾತನಾಡಿ, ‘ಧ್ವನಿಯಿಲ್ಲದವರಿಗೆ ಶಕ್ತಿತುಂಬಲು ಅಂಬೇಡ್ಕರ್‌ ಶ್ರಮಿಸಿದರು. ಸರ್ಕಾರಿ ಹುದ್ದೆಗಳಲ್ಲಿರುವವರು ಅಂಬೇಡ್ಕರ್ ಆಶಯಗಳನ್ನು ಪಾಲಿಸಬೇಕು. ಆ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಅಖಿಲ ಭಾರತ ಎಸ್ಸಿ, ಎಸ್ಟಿ, ಒಬಿಸಿ ಬ್ಯಾಂಕ್‌ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಸ್‌.ಕೆ.ಪಾಟೀಲ, ಪ್ರಧಾನ ಕಾರ್ಯದರ್ಶಿ ಮನೋಜ್‌ ಗೋಯೆಲ್‌, ಬ್ಯಾಂಕ್ ಆಫ್‌ ಇಂಡಿಯಾ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಮೋಹನಕುಮಾರ್‌, ಉಪ ಪ್ರಧಾನ ವ್ಯವಸ್ಥಾಪಕರಾದ ಪ್ರಮೋದ್ ಕುಮಾರ್ ಬಾಥಲ್, ಬಿ.ರಾಮಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.