ಮೈಸೂರು: ‘ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ಅನುದಾನವನ್ನು ಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಸಾಧಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದರು.
‘ಅಂಗನವಾಡಿ ಕೇಂದ್ರಗಳಲ್ಲಿ 3 ಮತ್ತು 6 ವರ್ಷದೊಳಗಿನ ಮಕ್ಕಳ ಹಾಜರಾತಿ ವ್ಯತ್ಯಾಸವಾಗಿರುವ ಕುರಿತು ಮರು ಪರಿಶೀಲನೆ ನಡೆಸಿ ವಾರದೊಳಗೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ‘ಜಿಲ್ಲೆಯಲ್ಲಿ 2,933 ಅಂಗನವಾಡಿ ಕೇಂದ್ರಗಳಿದ್ದು, 1,77,128 ಫಲಾನುಭವಿಗಳಿದ್ದಾರೆ. 3ರಿಂದ 6 ವರ್ಷದೊಳಗಿನ 47,796, ಗರ್ಭಿಣಿಯರು-14,880, ಬಾಣಂತಿಯರು-13,157 ಮಂದಿ ಇದ್ದಾರೆ’ ಎಂದು ಮಾಹಿತಿ ನೀಡಿದರು.
ಮಕ್ಕಳ ಸಂಖ್ಯೆಯ ಪ್ರಮಾಣದಲ್ಲಿ ವ್ಯತ್ಯಾಸ ಆಗಿರುವುದನ್ನು ಗಮನಿಸಿದ ಸೆಲ್ವಕುಮಾರ್, ‘ಆರು ವರ್ಷದೊಳಗಿನ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣವೇನು? ಇವರು ಎಲ್ಲಿ ಹೋಗಿದ್ದಾರೆ, ಅವರನ್ನು ಟ್ರ್ಯಾಕ್ ಮಾಡಿಲ್ಲವೇ?’ ಎಂದು ಕೇಳಿದರು.
ಉತ್ತರಿಸಿದ ಬಸವರಾಜು, ‘ಕೊಡಗು ಜಿಲ್ಲೆಗೆ, ಕೇರಳಕ್ಕೆ ಕೂಲಿಗೆ ಹೋಗುವವರು ಮಕ್ಕಳನ್ನೂ ಕರೆದೊಯ್ಯುತ್ತಾರೆ’ ಎಂದರು.
‘ಹಾಗಿದ್ದರೆ ಬೇರೆ ಕಡೆಯಿಂದ ಬಂದವರು ಇಲ್ಲಿನ ಪಟ್ಟಿಗೆ ಸೇರಿಲ್ಲವೇ?’ ಎಂದು ಸೆಲ್ವಕುಮಾರ್ ಮರುಪ್ರಶ್ನೆ ಹಾಕಿದರು. ‘ನೀವು ಸರಿಯಾಗಿ ಟ್ರ್ಯಾಕ್ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜನಿಸಿದ ಮಕ್ಕಳ ಸಂಖ್ಯೆಯ ವಿವರ ಇರುತ್ತದೆ. ಕಳೆದ ಆರು ವರ್ಷಗಳಲ್ಲಿ ಜನಿಸಿರುವ ಮಕ್ಕಳ ವಿವರ ಪಡೆದು ಬಿಇಒ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಬೇಕು. ಜುಲೈ 28ರೊಳಗೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.
‘ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಾಜೀವ್‌ಗಾಂಧಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವರ್ಷದೊಳಗೆ ಮುಗಿಸುವ ಗುರಿ ಕೊಡಲಾಗಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿ.ಪ್ರಿಯದರ್ಶಿನಿ ತಿಳಿಸಿದರು.
ಡಿಡಿಪಿಐ ಎಸ್.ಟಿ. ಜವರೇಗೌಡ ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಸರ್ಕಾರ 20 ಅಂಶ ಹಾಗೂ ಜಿಲ್ಲೆಯಲ್ಲಿ 25 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.
ಅಕ್ಷರ ದಾಸೋಹ ಯೋಜನೆ ಸಮನ್ವಯಾಧಿಕಾರಿ ಕೃಷ್ಣ, ‘ಮೊಟ್ಟೆ ಬೆಲೆ ಹೆಚ್ಚಳ ಆಗುತ್ತಿರುವುದರಿಂದ ಸರ್ಕಾರದಿಂದ ನೀಡುವ ಹಣ ಹೆಚ್ಚಿಸಬೇಕೆಂದು ಮುಖ್ಯಶಿಕ್ಷಕರು ಪ್ರಸ್ತಾವ ಸಲ್ಲಿಸುತ್ತಿದ್ದಾರೆ. ಇದನ್ನು ಆಯುಕ್ತರ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ’ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಎಂ.ಕೃಷ್ಣರಾಜು, ಸವಿತಾ, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಪಾಲ್ಗೊಂಡಿದ್ದರು.
ಇತ್ಯಥ್ಯಕ್ಕೆ ಕಾಲಮಿತಿ:
ಎಡಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ‘ಜಿಲ್ಲೆಯಲ್ಲಿ 137 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಹಕ್ಕುಪತ್ರ ಭೂ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ಹಾಕಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ’ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಇ ಎ.ಎಸ್.ರಂಜಿತ್‌ಕುಮಾರ್ ಮಾತನಾಡಿ ‘1909 ಕುಡಿಯುವ ನೀರಿನ ಕಾಮಗಾರಿಗಳಲ್ಲಿ 1580 ಪೂರ್ಣವಾಗಿವೆ. 4.71 ಲಕ್ಷ ಮನೆಗಳಲ್ಲಿ 4.45 ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಶೇ 100ರಷ್ಟು ಗುರಿ ತಲುಪಲಿದ್ದೇವೆ’ ಎಂದು ಹೇಳಿದರು.
‘ಜುಲೈನಲ್ಲಿ 22 ಮಿ.ಮೀ. ಮಳೆ ಕೊರತೆಯಾಗಿದೆ. ಮಾಸಾಂತ್ಯದಲ್ಲಿ ಮಳೆ ಬೀಳದಿದ್ದರೆ ರಾಗಿಯ ಇಳುವರಿ ಮೇಲೆ ಪರಿಣಾಮ ಬೀರಲಿದೆ. ರಸಗೊಬ್ಬರ ಬಿತ್ತನೆ ಬೀಜದ ಕೊರತೆ ಇಲ್ಲ. ಎಚ್.ಡಿ.ಕೋಟೆ ಸರಗೂರು ತಾಲ್ಲೂಕುಗಳಲ್ಲಿ ಮುಸುಕಿನಜೋಳಕ್ಕೆ ಬೂದುರೋಗ ಶುಂಠಿಗೂ ರೋಗ ಕಾಣಿಸಿಕೊಂಡಿದೆ. ನಿವಾರಿಸಲು ರೈತರಿಗೆ ಔಷಧ ಕೊಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.