ADVERTISEMENT

ಆದ್ಯತೆ ಮೇರೆಗೆ ಎಲ್ಲರಿಗೂ ಲಸಿಕೆ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌

ಜೂನ್‌ 24ರಿಂದ ವಾರ್ಡ್‌ಗಳಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 3:28 IST
Last Updated 22 ಜೂನ್ 2021, 3:28 IST
ಯುವತಿಯರಾದ ಎನ್.ಹರ್ಷಿತಾ, ಪೂಜಾ ಸಿಂಗ್ ಅವರಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು
ಯುವತಿಯರಾದ ಎನ್.ಹರ್ಷಿತಾ, ಪೂಜಾ ಸಿಂಗ್ ಅವರಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು   

ಮೈಸೂರು: ‘ಕೋವಿಡ್‌ ಲಸಿಕಾ ಅಭಿಯಾನ ಒಂದು ದಿನಕ್ಕೆ ಸೀಮಿತವಲ್ಲ. ಆದ್ಯತೆ ಮೇರೆಗೆ ಎಲ್ಲರಿಗೂ ಲಸಿಕೆ ಹಾಕಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಸೋಮವಾರ ಇಲ್ಲಿ ತಿಳಿಸಿದರು.

ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿದ್ದ ಕೋವಿಡ್ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮಾತನಾ
ಡಿದ ಅವರು, ‘ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಹೆಚ್ಚು ಲಸಿಕೆ ಮಂಜೂರು ಮಾಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಜಿಲ್ಲಾಡಳಿತದಿಂದ ನಡೆದಿದೆ’ ಎಂದು ಇದೇ ಸಂದರ್ಭ ಹೇಳಿದರು.

‘ಕೋವಿಡ್‌ ನಿಯಂತ್ರಿಸಲು ಎರಡು ದಾರಿ ಇವೆ. ಹೆಚ್ಚೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆಗೊಳ
ಪಡಿಸುವುದು ಮತ್ತು ಸರ್ಕಾರದ ಆದ್ಯತಾ ಪಟ್ಟಿಯಂತೆ ಎಲ್ಲರಿಗೂ ಕೋವಿಡ್‌ ಲಸಿಕೆ ಹಾಕಿಸುವುದು’ ಎಂದು ಬಗಾದಿ ತಿಳಿಸಿದರು.

ADVERTISEMENT

ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ‘ಜೂನ್‌ 16, 17ರಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಲಾಗಿತ್ತು. ಆ ಸಂದರ್ಭ 21 ಸಾವಿರ ಜನರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ನೋಂದಾಯಿಸಿಕೊಂಡಿದ್ದರು. ಜೂನ್‌ 30ರೊಳಗೆ ಈ ಎಲ್ಲರಿಗೂ ಲಸಿಕೆ ಹಾಕಿಸಲಾಗುವುದು’ ಎಂದು ತಿಳಿಸಿದರು.

‘ಪಾಲಿಕೆಯ 53ನೇ ವಾರ್ಡ್‌ ವ್ಯಾಪ್ತಿಯಲ್ಲಿ ಶ್ರಮಿಕರು, ದುಡಿಯುವ ವರ್ಗದವರೇ ಹೆಚ್ಚಿದ್ದಾರೆ. 2816 ಜನರು ಇಲ್ಲಿ ನೋಂದಾಯಿಸಿಕೊಂಡಿದ್ದರು. ಈ ಎಲ್ಲರಿಗೂ ಸೋಮವಾರ, ಮಂಗಳವಾರ ಕೋವಿಡ್‌ ಲಸಿಕೆ ಹಾಕಲಾಗುವುದು’ ಎಂದು ಅವರು ಹೇಳಿದರು.

ಯುವತಿಯರಾದ ಎನ್.ಹರ್ಷಿತಾ, ಪೂಜಾ ಸಿಂಗ್ ಅವರಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿದರು.

ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್ ಮಾತನಾಡಿ ‘ಜೀವದ ಜೊತೆಗೆ ಜೀವನವೂ ಮುಖ್ಯವಾಗಿದೆ. ಕೋವಿಡ್‌ ಲಸಿಕೆ ಆರೋಗ್ಯ ರಕ್ಷಾ ಕವಚ. ಲಸಿಕೆ ಪಡೆಯುವುದರಿಂದ ಮನೋಸ್ಥೈರ್ಯ ಹೆಚ್ಚಲಿದೆ. ಲಸಿಕೆ ಪಡೆದ ಬಳಿಕವೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಿ’ ಎಂದು ಕಿವಿಮಾತು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ ‘ಎಲ್ಲ ವಾರ್ಡ್‌ಗಳಲ್ಲೂ ಲಸಿಕೆ ಅಭಿಯಾನ ನಡೆಯಲಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ಅಂತರರಾಷ್ಟ್ರೀಯ ಮಟ್ಟದ ಗಂಜಿಫಾ ಕಲಾವಿದ ರಘುಪತಿ ಭಟ್, ಪಾಲಿಕೆ ಸದಸ್ಯರಾದ ರೂಪಾ, ಬಿ.ವಿ.ಮಂಜುನಾಥ್, ಕೆ.ಆರ್.ಕ್ಷೇತ್ರದ ಮಂಡಲ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿಗಳಾದ ಜೆ.ನಾಗೇಂದ್ರಕುಮಾರ್, ಓಂ ಶ್ರೀನಿವಾಸ್, ಪ್ರಮುಖರಾದ ಮೈ.ಪು.ರಾಜೇಶ್, ನೂರ್ ಫಾತಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.