ADVERTISEMENT

ಮೈಸೂರು: ನಗರದೆಲ್ಲೆಡೆ ಮಹರ್ಷಿ ವಾಲ್ಮೀಕಿ ಸ್ಮರಣೆ

ಜಿಲ್ಲಾಡಳಿತ, ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 3:31 IST
Last Updated 1 ನವೆಂಬರ್ 2020, 3:31 IST
ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನಭವನದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂದರ್ಶಕ ಪ್ರಾಧ್ಯಾಪಕ ಸಿ.ನಾಗಣ್ಣ, ಕುಲಸಚಿವ ಬಿ.ಶಿವಪ್ಪ ಇದ್ದಾರೆ
ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನಭವನದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂದರ್ಶಕ ಪ್ರಾಧ್ಯಾಪಕ ಸಿ.ನಾಗಣ್ಣ, ಕುಲಸಚಿವ ಬಿ.ಶಿವಪ್ಪ ಇದ್ದಾರೆ   

ಮೈಸೂರು: ನಗರದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಅವರನ್ನು ಭಕ್ತಿಭಾವದಿಂದ ಸ್ಮರಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯ, ಜಿಲ್ಲಾಡಳಿತ ಸೇರಿದಂತೆ ಹಲವು ಸಂಘ, ಸಂಸ್ಥೆಗಳು, ವೇದಿಕೆಗಳ ವತಿಯಿಂದ ವಾಲ್ಮೀಕಿ ಜಯಂತಿ ನಡೆಯಿತು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರು ವಿ.ವಿ ಕುಲಪ‍ತಿ ಪ್ರೊ.ಜಿ.ಹೇಮಂತಕುಮಾರ್ ಉದ್ಘಾಟಿಸಿದರು.

ವಾಲ್ಮೀಕಿ ಅವರು ಕವಿಗಳ ಕವಿ. ಅವರು ಬರೆದ ಮಹಾಕಾವ್ಯವು ಇಂದಿಗೂ ಜೀವಂತವಾಗಿದೆ. ಇಡೀ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಹೇಳುವ ಕೃತಿಯಾಗಿದೆ ಎಂದು ಶ್ಲಾಘಿಸಿದರು.

ADVERTISEMENT

ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯ ರಾಮಾಯಣ. ವಿಶ್ವ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಇದಾಗಿದೆ. ದೇಶ, ಭಾಷೆಗಳನ್ನು ಮೀರಿದ ಮನ್ನಣೆಗೆ ಪಾತ್ರವಾದ ಕೃತಿ ಇದು. ಪ್ರಸಕ್ತ ಜಗತ್ತಿನ ತಲ್ಲಣಗಳಿಗೆ ಇದರಲ್ಲಿ ಉತ್ತರ ದೊರೆಯುತ್ತದೆ ಎಂದರು.

ಇದರಲ್ಲಿರುವ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕವಿ ಕುವೆಂಪು ಅವರು ರಾಮಾಯಣ ಮತ್ತು ಕವಿ ವಾಲ್ಮೀಕಿ ನಮಗೆ ದೊರೆತಿರುವುದು ಭುವನದ ಭಾಗ್ಯ ಎಂದು ವ್ಯಾಖ್ಯಾನಿಸಿದ್ದಾರೆ. ಇದರ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಸಂದೇಶ ಕುರಿತು ಮೈಸೂರು ವಿ.ವಿ ಸಂದರ್ಶಕ ಪ್ರಾಧ್ಯಾಪಕ ಸಿ.ನಾಗಣ್ಣ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಒಂದು ವರ್ಗಕ್ಕೆ ಮಾತ್ರ ಸೀಮಿತರಲ್ಲ. ಅವರು ಎಲ್ಲ ವರ್ಗಕ್ಕೂ ಸೇರಿದವರಾಗಿದ್ದಾರೆ.ಪ್ರೀತಿ, ತ್ಯಾಗ, ಮನುಷ್ಯನ ಸಂಬಂಧಗಳಂತಹ ಮೌಲ್ಯಗಳನ್ನು ರಾಮಾಯಣ ಮಹಾಕಾವ್ಯ ಎತ್ತಿ ಹಿಡಿದಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಕೆ.ಮಹದೇವನ್ ಇದ್ದರು.

ಕಾರ್ಯಕ್ರಮವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಯಿತು.

ಅಶ್ವಿನಿಗೆ ₹ 1 ಲಕ್ಷ ನಗದು ಬಹುಮಾನ

ಮೈಸೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ ಎಂ.ಅಶ್ವಿನಿ ಅವರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ₹ 1 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕಲಾಮಂದಿರದ ಮನೆಯಂಗಳದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಎಂಬುವವರ ಸ್ಮರಣಾರ್ಥ ಶಾಸಕ ಜಿ.ಟಿ.ದೇವೇಗೌಡ ಬಹುಮಾನ ವಿತರಿಸಿದರು.

ನಂತರ, ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಲು ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯದ ಓದು ಅಗತ್ಯ. ಈ ಮಹಾಕಾವ್ಯವನ್ನು ಯುವಕರು ಓದಬೇಕು. ರಾಮರಾಜ್ಯದ ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಉಪಮೇಯರ್ ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಭಾರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.