ಮೈಸೂರು: ‘ಮಹರ್ಷಿ ವಾಲ್ಮೀಕಿ ಪ್ರಪಂಚಕ್ಕೆ ಧರ್ಮದ ಮೌಲ್ಯವನ್ನು, ನೈತಿಕತೆಯನ್ನು ನೀಡಿದ ಮಹನೀಯ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಹಯೋಗದಲ್ಲಿ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
‘ವಿಧಾನ ಸೌಧದಲ್ಲಿ ₹ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ರಾಮನನ್ನು ರಾಮಾಯಣದ ಮೂಲಕ ಸೃಷ್ಟಿ ಮಾಡಿದವರು, ಧರ್ಮ ಪಾಲನೆಯ ಸಂದೇಶ ನೀಡಿದವರು, ಸಾಮಾಜಿಕ ಆರ್ಥಿಕ, ಸಮಾನತೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬಿತ್ತಿದವರು ಮಹರ್ಷಿಗಳು’ ಎಂದು ಬಣ್ಣಿಸಿದರು.
‘ಮೂಢನಂಬಿಕೆಗಳಿಗೆ ಒಳಗಾಗದೆ, ಜಾತಿ ಹೆಸರಿನಲ್ಲಿ ಹೊಡೆದಾಡದೇ ಎಲ್ಲರೂ ಸಮಾನವಾಗಿ ಬದುಕಬೇಕು. ಜಾತಿ ರಹಿತವಾದ ಸಮಾಜವನ್ನು ಕಟ್ಟಬೇಕು. ವಾಲ್ಮೀಕಿ, ಅಂಬೇಡ್ಕರ್, ಬುದ್ಧ ಸಹ ನಮಗೆ ಅದನ್ನೇ ಹೇಳಿದ್ದಾರೆ’ ಎಂದರು.
ಶಾಸಕ ತನ್ವೀರ್ ಸೇಠ್, ‘ಕೆಲವೇ ಜಾತಿ, ಧರ್ಮದ ಆಧಾರದಲ್ಲಿ ಮನುಷ್ಯ ಬದುಕಲು ಸಾಧ್ಯವಿಲ್ಲ, ಶಿಕ್ಷಣ ನಮ್ಮ ಮೂಲ ಮುದ್ರೆಯಾಗಬೇಕು. ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು’ ಎಂದು ಆಶಿಸಿದರು.
ಶಾಸಕರಾದ ಜಿ.ಟಿ. ದೇವೇಗೌಡ, ‘ವಾಲ್ಮೀಕಿ ತಮ್ಮ ಮಹಾಕಾವ್ಯದ ಮೂಲಕ ಅಮರರಾಗಿದ್ದಾರೆ. ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಉತ್ತಮ ನಾಯಕರನ್ನಾಗಿ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಹರೀಶ್ ಗೌಡ, ‘ಅವರ ಆದರ್ಶಗಳು ನಮಗೆ ಸ್ಪೂರ್ತಿ, ಅವರು ನಡೆದು ಬಂದ ಹಾದಿಯಲ್ಲಿ ನಾವು ಜೀವನವನ್ನು ನಡೆಸೋಣ’ ಎಂದರು.
ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಿ. ರಂಗಸ್ವಾಮಿ, ‘ಜಯಂತಿಯ ಮೂಲ ಉದ್ದೇಶ ಮಹಾನ್ ವ್ಯಕ್ತಿಗಳ ಜೀವನದ ಬಗ್ಗೆ ತಿಳಿದುಕೊಳ್ಳುವುದೇ ಆಗಿದೆ. ಅವರ ಸಾಧನೆಗಳು ನಮ್ಮ ಬದುಕಿಗೆ ಆದರ್ಶವಾಗಬೇಕು’ ಎಂದು ಸಲಹೆ ನೀಡಿದರು.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪರಿಶಿಷ್ಟ ವರ್ಗದ ಶಾಲೆಗಳ ಅಧ್ಯಾಪಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಧಾನಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎಂ.ಕೆ. ಮಲ್ಲೇಶ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿ. ಶಿವಕುಮಾರ್, ವಾಲ್ಮೀಕಿ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಅದ್ದೂರಿ ಮೆರವಣಿಗೆ: ಜಿಟಿಡಿ ನೃತ್ಯ ವಾಲ್ಮೀಕಿ ಜಯಂತಿ ಅಂಗವಾಗಿ ಕೋಟೆ ಆಂಜನೇಯ ದೇಗುಲದಿಂದ ಕಲಾಮಂದಿರದವರೆಗೆ ವಾಲ್ಮೀಕಿ ಅವರ ಭಾವಚಿತ್ರವನ್ನು ಬೆಳ್ಳಿಯ ರಥದಲ್ಲಿ ಇಟ್ಟು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸ ಹೊತ್ತು ನಡೆದರು. ಡೊಳ್ಳು ಕಂಸಾಳೆ ತಮಟೆ ನಂದಿಧ್ವಜ ಹುಲಿ ವೇಷ ವೀರಗಾಸೆ ಸೇರಿದಂತೆ ಹತ್ತಾರು ವಿವಿಧ ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಿದವು. ವಿವಿಧ ಸಾಹಸ ಪ್ರದರ್ಶನಗಳು ಆಕರ್ಷಿಸಿದವು. ಶಾಸಕ ಜಿ.ಟಿ. ದೇವೇಗೌಡ ತಮಟೆ ಸದ್ದಿಗೆ ಕುಣಿಯುವ ಮೂಲಕ ಗಮನ ಸೆಳೆದರು. ಜೊತೆಯಲ್ಲಿ ಇದ್ದ ಮುಖಂಡರೂ ಅವರಿಗೆ ಸಾಥ್ ನೀಡಿದರು. ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳ ನೂರಾರು ಪ್ರತಿನಿಧಿಗಳು ಹೆಜ್ಜೆ ಹಾಕಿದರು.
ಮೈಸೂರು ವಿ.ವಿ.ಯಲ್ಲಿ ಆಚರಣೆ
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ‘ವಾಲ್ಮೀಕಿಯವರ ರಾಮಾಯಣ ಕೃತಿಯು ಅಂದಿನ ಕಾಲದಲ್ಲೇ ವೈಜ್ಞಾನಿಕ ಪ್ರಬುದ್ಧತೆ ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ. ಪುಷ್ಪಕ ವಿಮಾನದ ತಂತ್ರಜ್ಞಾನ ಅಂದೇ ಇದ್ದುದನ್ನು ವಾಲ್ಮೀಕಿ ದಾಖಲಿಸುತ್ತಾರೆ. ಯುವ ಜನಾಂಗ ಇಂದು ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ಓದಬೇಕು’ ಎಂದರು. ಕುಲಸಚಿವೆ ಎಂ.ಕೆ. ಸವಿತಾ ‘ರಾಮಾಯಣ ಕಾವ್ಯದಲ್ಲಿ ಬರುವ ರಾಮಸೇತು ಕಟ್ಟಿದ ಘಟನೆಯನ್ನು ಎಐನಿಂದ ಸಾಬೀತು ಪಡಿಸಲು ಶೋಧನೆ ನಡೆಯುತ್ತಿದೆ. ಸದಾ ಚರ್ಚೆಗೆ ಒಳಗಾಗಿರುವ ಕೃತಿ ರಾಮಾಯಣ’ ಎಂದರು. ಪ್ರೊ.ಎನ್. ಕೆ. ಲೋಲಾಕ್ಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.