ADVERTISEMENT

ದಾರ್ಶನಿಕರ ಸಂದೇಶ ಪಾಲಿಸಿರಿ: ಶಾಸಕ ಜಿ.ಟಿ. ದೇವೇಗೌಡ

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಜಿಟಿಡಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:36 IST
Last Updated 24 ನವೆಂಬರ್ 2025, 2:36 IST
ಮೈಸೂರಿನ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು
ಮೈಸೂರಿನ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು   
ಕನ್ನಡ ರಾಜ್ಯೋತ್ಸವ ಆಚರಣೆ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ಪ್ರದಾನ

ಮೈಸೂರು: ‘ಸಮಾಜದ ಸುಧಾರಣೆಗೆ ಕೊಡುಗೆ ನೀಡಿದ ಮಹನೀಯರ ಜಯಂತಿಗಳನ್ನು ಎಲ್ಲರೂ ಸೇರಿ ಆಚರಿಸಬೇಕು. ಅವರು ಸಾರಿದ ಮಾನವೀಯ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.

‌ನಗರದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜುಂಂತಿ, ಕನ್ನಡ ರಾಜ್ಯೋತ್ಸವ ಹಾಗೂ ವಾಲ್ಮೀಕಿ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾರ್ಶನಿಕರು ಹಾಗೂ ಮಹನೀಯರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿದೆ ಎಲ್ಲಾ ಸಮುದಾಯದವರು ಗೌರವಿಸಿ ಅವರ ಆದರ್ಶ–ತತ್ವಗಳನ್ನು ಪಾಲಿಸಬೇಕು’ ಎಂದರು.

ADVERTISEMENT

‘ನಾಯಕ ಸಮಾಜ ಮೊದಲಿನಿಂದಲೂ ಹಿಂದುಳಿದಿದೆ. ಹುಣಸೂರು ಕ್ಷೇತ್ರದಲ್ಲಾಗಲಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಾಗಲಿ ಹೆಚ್ಚಿನ ಬೆಂಬಲ ನೀಡುತ್ತಾ ಬಂದಿದ್ದೇನೆ. ಅನಿಲ್ ಚಿಕ್ಕಮಾದು ಅವರನ್ನು ಹನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯನನ್ನಾಗಿ ಮಾಡಿದ್ದೆ. ಚಿಕ್ಕಮಾದು ಅವರನ್ನು ಜೆಡಿಎಸ್‌ಗೆ ಕರೆತಂದು ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಿದ್ದೆ. ಅಂತೆಯೇ, ಎಸ್‌ಟಿ ಸಮಾಜಕ್ಕೆ ಸೇರಿದ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕೆಂಬ ಕನಸು ನನಸಾಗಲಿ’ ಎಂದು ಹೇಳಿದರು.

ಏಳಿಗೆಗೆ ಶ್ರಮಿಸಿ: ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಮಾತನಾಡಿ, ‘ಪರಿಶಿಷ್ಟ ಪಂಗಡದವರು ಹೆಚ್ಚು ವಿದ್ಯಾವಂತರಾಗಬೇಕು. ಸರ್ಕಾರಿ ಉದ್ಯೋಗಗಳನ್ನು ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಮೈಸೂರು ನಗರದಲ್ಲಿ ವಾಲ್ಮೀಕಿ ಶೈಕ್ಷಣಿಕ ಕೇಂದ್ರ ತೆರೆಯಲು ಶ್ರಮಿಸಲಾಗುವುದು’ ಎಂದು ಹೇಳಿದರು.

ಎಂ.ರಾಮಚಂದ್ರು, ಪು.ಶ್ರೀನಿವಾಸನಾಯಕ, ಕುಂಬ್ರಳ್ಳಿ ಎನ್.ಸುಬ್ಬಣ್ಣ, ಕೆಂಪನಾಯಕ, ಆರ್.ಸರ್ವೇಶ್, ಪಿ.ದೇವರಾಜು ಅವರಿಗೆ ‘ವಾಲ್ಮೀಕಿ ಸೇವಾರತ್ನ ಪ್ರಶಸ್ತಿ’ಯನ್ನು ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಶ್ರೀಧರ್ ಚಾಮುಂಡಿಬೆಟ್ಟ ಮತ್ತು ಕಾರ್ಯಾಧ್ಯಕ್ಷ ಪ್ರಭಾಕರ ಹುಣಸೂರು ಪ್ರದಾನ ಮಾಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಚಿಕ್ಕಣ್ಣ, ಕೆ.ಬಿ.ರಮೇಶನಾಯಕ, ರತ್ನಾ ಚಂದ್ರಶೇಖರ್, ಕಾಳಸಿದ್ದ ನಾಯಕ, ಬಿ.ವಿ.ಸ್ವಾಮಿನಾಯಕ, ಕಳಲೆ ಮಹೇಶ್, ಶಶಿಕುಮಾರ್, ರಂಗಸ್ವಾಮಿ, ಭವ್ಯಾ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಅಧ್ಯಕ್ಷ ದ್ಯಾವಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ನಗರ ಅಧ್ಯಕ್ಷ ರಾಜುನಾಯಕ, ರಾಜ್ಯ ಉಪಾಧ್ಯಕ್ಷ ಜಿ.ಡಿ.ಸ್ವಾಮಿ, ಡಿ.ವೆಂಕಟೇಶನಾಯಕ, ಮೂರ್ತಿ ಕುಪ್ಪರವಳ್ಳಿ, ರವಿಕುಮಾರ್, ಎಂ.ಮಣಿಕಂಠ ನಾಯಕ ಪಾಲ್ಗೊಂಡಿದ್ದರು. 

ಆರ್ಥಿಕ ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜಗಳು ಅಭಿವೃದ್ಧಿ ಹೊಂದಬೇಕು
ಜಿ.ಟಿ. ದೇವೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.