ADVERTISEMENT

ಮೈಸೂರು: ‘ಬದುಕಿನಲ್ಲಿ ವೈಚಾರಿಕತೆ ಬೆಳೆಯಲಿ’

ರವಿವರ್ಮಕುಮಾರ್‌ಗೆ ‘ಡಿ. ದೇವರಾಜ ಅರಸು–ಹಾವನೂರು’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:00 IST
Last Updated 22 ನವೆಂಬರ್ 2025, 5:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ನಾವು ಕಲಿತ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿರಬೇಕು. ವೈಚಾರಿಕತೆ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ನಾವು ಓದಿಯೂ ಪ್ರಯೋಜನ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘವು ಆಯೋಜಿಸಿದ್ದ ಸಂಘದ ಪ್ರಥಮ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ದೇವರಾಜು ಅರಸು ಮತ್ತು ಹಾವನೂರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ವ್ಯಕ್ತಿಯ ಬದುಕಿನಲ್ಲಿ ಶಿಕ್ಷಣ ಬಹಳ ಮುಖ್ಯ. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಶಿಕ್ಷಣದ ಪ್ರಮಾಣ ಶೇ 10-12 ಮಾತ್ರವಿತ್ತು. ಇಂದು ಶೇ 78ರಷ್ಟು ಏರಿದೆ. ಇದು ಶೇ 100 ರಷ್ಟು ಆಗಬೇಕಿದೆ’ ಎಂದರು.

ADVERTISEMENT

‘ರಾಜ್ಯದ ವಿವಿಧ ವಿದ್ಯಾರ್ಥಿನಿಲಯಗಳಲ್ಲಿ ಪ್ರಸ್ತುತ 3.88 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೈಸೂರು ಜಿಲ್ಲೆಯ 65 ವಿದ್ಯಾರ್ಥಿನಿಲಯಗಳಲ್ಲಿ 6,500 ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ. ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದು, ಅದರಿಂದ ಭವಿಷ್ಯ ರೂಪಿಸಿಕೊಂಡವರು ಸಮಾಜಕ್ಕೆ ಹಿಂತಿರುಗಿ ಕೊಡುಗೆ ನೀಡಬೇಕು. ಆಗ ಮಾತ್ರ ಸಮಾಜ ಸರ್ವತೋಮುಖವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ‘ಸಿದ್ದರಾಮಯ್ಯ ನಮ್ಮ ನಡುವಿನ ನೈತಿಕ ನಾಯಕ. ಅದೇ ಅವರ ಶಕ್ತಿ.‌ ದಲಿತ- ಹಿಂದುಳಿದ ವರ್ಗಗಳಿಗೆ ಸಂವಿಧಾನ ಬದ್ಧ ಮೀಸಲಾತಿ ಕೊಡಲು ಸಾಕಷ್ಟು ವಿರೋಧ ಎದುರಿಸುತ್ತಿದ್ದಾರೆ. ಆದರೆ ಅವರು ಇದಕ್ಕೆಲ್ಲ ಹೆದರುವ ವ್ಯಕ್ತಿ ಅಲ್ಲ. ಬಿಸಿಎಂ ವಿದ್ಯಾರ್ಥಿನಿಲಯಗಳ ಸ್ಥಾಪನೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ’ ಎಂದರು.

ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ, ‘ನಗರಗಳ ವ್ಯಾಪ್ತಿಯಲ್ಲಿ ಓದಲು ಬರುವವರ ಸಂಖ್ಯೆ ಹೆಚ್ಚಿದ್ದು, ಹೆಚ್ಚು ನಿಲಯಗಳನ್ನು ತೆರೆಯಬೇಕು. ಮೆರಿಟ್ ಇಲ್ಲದ ಕಡುಬಡವ ಮಕ್ಕಳಿಗೆ ಸೀಟ್ ಸಿಗುತ್ತಿಲ್ಲ. ಇನ್ನೂ 2000-2500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

ಹಿರಿಯ ವಕೀಲ ರವಿವರ್ಮ ಕುಮಾರ್ ಅವರಿಗೆ ‘ಡಿ. ದೇವರಾಜು ಅರಸು ಮತ್ತು ಎಲ್‌.ಜಿ. ಹಾವನೂರು ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಾಸಕರಾದ ಕೆ. ಹರೀಶ್‌ ಗೌಡ, ಡಿ. ರವಿಶಂಕರ್, ವಿಧಾನ ಪರಿಷತ್‌ ಸದಸ್ಯರಾದ ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಮಂಡ್ಯ ಜಿಲ್ಲಾಧಿಕಾರಿ ಕುಮಾರ, ದಕ್ಷಿಣ ವಲಯ ಡಿಐಜಿಪಿ ಡಾ. ಎಂ.ಬಿ. ಬೋರಲಿಂಗಯ್ಯ, ಜಿ.ಪಂ. ಸಿಇಒ ಯುಕೇಶ್‌ಕುಮಾರ್, ಪೆರಿಯಾರ್ ಅಂತರರಾಷ್ಟ್ರೀಯ ಸಂಸ್ಥೆ ಅಧ್ಯಕ್ಷ ಸೋಮ ಇಳಂಗೋವನ್‌, ರವಿ ಭೋಸರಾಜು, ಸಂಘದ ಗೌರವ ಅಧ್ಯಕ್ಷ ರಾಮಯ್ಯ ಪಾಲ್ಗೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.