ಮೈಸೂರು: ಪಟ್ಟಣದ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನ ಮತ್ತು ಹೌಸಿಂಗ್ ಬೋರ್ಡಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ಉತ್ಸವ ಮತ್ತು ನವರಾತ್ರಿ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದ್ದು, ದೇಗುಲ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ.
ವರದರಾಜ ಸ್ವಾಮಿ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ದೇವಸ್ಥಾನಗಳಿಗೆ ಈಗಾಗಲೇ ಸುಣ್ಣ ಬಣ್ಣ ಹೊಡೆದು ಸಿಂಗಾರಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ಎರಡೂ ದೇವಸ್ಥಾನಗಳಿಂದ ಪ್ರತ್ಯೇಕವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ವರದರಾಜಸ್ವಾಮಿ ದೇವಸ್ಥಾನದಲ್ಲಿ ವರದರಾಜಸ್ವಾಮಿ, ಶ್ರೀದೇವಿ, ಭೂದೇವಿ ಲಕ್ಷ್ಮೀ ದೇವರ ಮೂರ್ತಿಗೆ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಭಾನುವಾರದಿಂದ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ, ಉಯ್ಯಾಲೋತ್ಸವ, ಕಲ್ಯಾಣೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿದೆ.
ವಿಜಯದಶಮಿ ದಿನದಂದು ರಡೂ ದೇವಸ್ಥಾನಗಳ ಮೂಲ ದೇವರುಗಳ ಮೂರ್ತಿಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. ಇದರಲ್ಲಿ ಅನೇಕ ಕಲಾತಂಡಗಳು, ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ನಂತರ ಪೊಲೀಸ್ ಇಲಾಖೆಯಿಂದ ವರದರಾಜಸ್ವಾಮಿಗೆ ಗೌರವ ರಕ್ಷೆ ನೀಡುವ ಮೂಲಕ ಬನ್ನಿಮರಕ್ಕೆ ಪೊಲೀಸ್ ಪೂಜೆ ನೆರವೇರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.