ಮೈಸೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹಗುರವಾದ ಹೂವುಗಳ ಬೆಲೆಯು ಗಗನಕ್ಕೆ ಏರುತ್ತಿದ್ದು, ಗ್ರಾಹಕರು ಭಾರವಾದ ಹೃದಯದಿಂದಲೇ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಹಬ್ಬ ಆಚರಣೆಗೆ ಇನ್ನೊಂದೇ ದಿನ ಬಾಕಿ ಇದ್ದು, ದೇವರಾಜ ಮಾರುಕಟ್ಟೆಯ ಪ್ರಾಂಗಣ ಮುಂಜಾನೆಯಿಂದಲೇ ಜನರಿಂದ ಕಿಕ್ಕಿರಿದು ತುಂಬಿತ್ತು. ಜೊತೆಗೆ ಚಿಕ್ಕ ಗಡಿಯಾರದ ಸುತ್ತಲೂ ವರ್ತಕರು ಹೂ–ಹಣ್ಣಿನ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಚೌಕಾಸಿಗೆ ಅವಕಾಶ ಇಲ್ಲದಂತೆ ಚುರುಕಾಗಿ ಖರೀದಿ ನಡೆದಿತ್ತು.
ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವುಗಳೇ ಪ್ರಮುಖ ಆಕರ್ಷಣೆ. ಮನೆ–ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳು ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ವಾರದಿಂದಲೇ ಹೂವಿನ ಬೆಲೆ ಏರಿಕೆ ಆಗುತ್ತಿದ್ದು, ಬುಧವಾರ ಇವುಗಳ ಬೆಲೆ ಕೇಳಿಯೇ ಗ್ರಾಹಕರು ಹೌಹಾರಿದರು. ಕೆ.ಜಿ. ಲೆಕ್ಕದಲ್ಲಿ ಕೊಳ್ಳಲು ಬಯಸಿ ಬಂದವರು ಗ್ರಾಂಗಳ ಲೆಕ್ಕದಲ್ಲಿ ತೂಕ ಮಾಡಿಸಿಕೊಂಡು ಕೊಂಡೊಯ್ದರು.
ಕೆಲವು ದಿನದ ಹಿಂದಷ್ಟೇ ಪ್ರತಿ ಕೆ.ಜಿ.ಗೆ ₹600–800ರ ದರದಲ್ಲಿ ಮಾರಾಟ ಆಗುತ್ತಿದ್ದ ಕನಕಾಂಬರ ಈ ದಿನ ಮಾರುಕಟ್ಟೆಯಲ್ಲಿ ₹1500ರಿಂದ ₹2 ಸಾವಿರದವರೆಗೆ ಬೆಲೆ ಏರಿಸಿಕೊಂಡಿತ್ತು. ವರ್ತಕರು ಚೀಲದೊಳಗೆ ಬಚ್ಚಿಟ್ಟ ಹೂವುಗಳನ್ನು ತುಸುತುಸುವೇ ರಾಶಿ ಹಾಕಿ ಮುತ್ತುರತ್ನದಂತೆ ತೂಗಿದರು. 100 ಗ್ರಾಂಗೆ ₹150–200ರವರೆಗೆ ಮಾರಾಟ ನಡೆಯಿತು.
ಘಮ್ಮೆನ್ನುವ ಮೈಸೂರು ಮಲ್ಲಿಗೆ ಸಹ ಬೆಲೆ ಏರಿಸಿಕೊಂಡಿದ್ದು, ಕೆ.ಜಿ.ಗೆ ₹600ರಂತೆ ಮಾರಾಟ ನಡೆಯಿತು. ಮಂಗಳವಾರವಷ್ಟೇ ಕೆ.ಜಿ.ಗೆ ₹400 ಇದ್ದು, ಒಂದೇ ದಿನದಲ್ಲಿ ₹200ರಷ್ಟು ದರ ಹೆಚ್ಚಾಗಿತ್ತು. ಮಲ್ಲಿಗೆ ಪ್ರತಿ ಮಾರಿಗೆ ₹120ರ ಮೇಲೆ ಬೆಲೆ ಇತ್ತು. ಸೇವಂತಿಗೆ ಪ್ರತಿ ಕೆ.ಜಿ.ಗೆ ₹200ರಂತೆ, ಕಟ್ಟಿದ ಸೇವಂತಿಗೆ ಪ್ರತಿ ಮಾರಿಗೆ ₹60–80ರಂತೆ ಮಾರಾಟ ನಡೆಯಿತು. ಲಕ್ಷ್ಮಿಗೆ ಪ್ರಿಯವಾದ ಕಮಲದ ಹೂ ಜೋಡಿಗೆ ₹100 ಇತ್ತು. ಚೆಂಡು ಹೂವು ಕೆ.ಜಿ.ಗೆ ₹160, ಬಿಡಿ ಗುಲಾಬಿ (ಬಟನ್) ₹320 ಇದ್ದರೆ, ತುಳಸಿ ಪ್ರತಿ ಮಾರಿಗೆ ₹100ರಂತೆ ಮಾರಾಟ ನಡೆಯಿತು.
ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಅದರಲ್ಲೂ ಏಲಕ್ಕಿ ಬಾಳೆ ಹಣ್ಣು ಪ್ರತಿ ಕೆ.ಜಿ.ಗೆ ₹20–30 ದುಬಾರಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹100ರ ಸರಾಸರಿಯಲ್ಲಿ ಮಾರಾಟ ನಡೆದಿತ್ತು. ಸೇಬು, ದಾಳಿಂಬೆ, ಸೀಬೆ ಮೊದಲಾದ ಹಣ್ಣುಗಳ ಬೆಲೆಯೂ ತುಸು ಹೆಚ್ಚಿತ್ತು. ನಿಂಬೆಹಣ್ಣು ₹10ಕ್ಕೆ 3–4ರಂತೆ ಮಾರಾಟ ನಡೆಯಿತು.
ತರಕಾರಿ, ಸೊಪ್ಪಿನ ದರ ಸ್ಥಿರ: ಈ ವಾರ ತರಕಾರಿಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಟೊಮೆಟೊ ಇಳಿಕೆ ಹಾದಿಯಲ್ಲಿದ್ದರೆ, ಈರುಳ್ಳಿ ಧಾರಣೆ ಮಾತ್ರ ಅಲ್ಪ ಏರಿಕೆ ಕಂಡಿದೆ. ಸೊಪ್ಪುಗಳು ಅಗ್ಗವಾಗಿಯೇ ಮುಂದುವರಿದಿವೆ.
ಅಂಗಡಿಗಳಿಗೆ ಹೆಂಗಳೆಯರ ಲಗ್ಗೆ ಲಕ್ಷ್ಮಿ ಆರಾಧನೆಗೆ ಬೇಕಾದ ಬಳೆ ಅರಿಶಿನ–ಕುಂಕುಮ ಪೂಜಾ ಸಾಮಗ್ರಿ ಲಕ್ಷ್ಮಿ ಮುಖವಾಡ ಮೊದಲಾದವುಗಳ ಖರೀದಿಗಾಗಿ ಮಹಿಳೆಯರು ಮುಗಿಬಿದ್ದರು. ಬಳೆಗಳ ಮಾರಾಟ ಹಾಗೂ ಫ್ಯಾನ್ಸಿ ಸ್ಟೋರ್‌ಗಳು ಸ್ತ್ರೀಯರಿಂದ ತುಂಬಿದ್ದವು. ₹20ರಿಂದ ಹಿಡಿದು ದುಬಾರಿ ಬೆಲೆಯವರೆಗೂ ತರೇಹೆವಾರಿ ಮುಖವಾಡಗಳು ಕಮಲದ ಹೂವಿನ ಮಾದರಿಯ ತಳಹದಿಯ ಅಚ್ಚುಗಳು ಮಾರುಕಟ್ಟೆಯಲ್ಲಿ ಕಂಡುಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.