ADVERTISEMENT

‘ಅಪರೂಪ’ದ ಕೃತಿಗಳಲಿ ವಾರಿಜಾಶ್ರೀ ಗಾನ ವಿಹಾರ..

ವಾಣಿವಿಲಾಸ ಮೊಹಲ್ಲಾ 8ನೇ ಕ್ರಾಸ್‌: ವಿಶಿಷ್ಟ ಭಾವಾನುಭೂತಿ ನೀಡಿದ ಕಛೇರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 17:03 IST
Last Updated 8 ಸೆಪ್ಟೆಂಬರ್ 2022, 17:03 IST
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಗುರುವಾರ ವಿದುಷಿ ವಾರಿಜಾಶ್ರೀ ವೇಣುಗೋಪಾಲ್‌ ಗಾಯನ ಮೋಡಿ –ಪ್ರಜಾವಾಣಿ ಚಿತ್ರ
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಗುರುವಾರ ವಿದುಷಿ ವಾರಿಜಾಶ್ರೀ ವೇಣುಗೋಪಾಲ್‌ ಗಾಯನ ಮೋಡಿ –ಪ್ರಜಾವಾಣಿ ಚಿತ್ರ   

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತದ ಅತ್ಯಪರೂಪದ ಕೃತಿಗಳನ್ನು ಹಾಡಿದ ವಿದುಷಿ ವಾರಿಜಾಶ್ರೀ ವೇಣುಗೋಪಾಲ್‌ ಸಹೃದಯರಿಗೆ ವಿಶಿಷ್ಟ ಭಾವಾನುಭೂತಿ ನೀಡಿದರಲ್ಲದೆ, ಹೊಸತೆನಿಸುವ ನಾದಲೋಕವನ್ನು ತೆರೆದಿಟ್ಟರು.

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಗುರುವಾರ ವಾರಿಜಾಶ್ರೀ ಗಾಯನವು ಕಣ್ಮುಚ್ಚಿ ವಿಹರಿಸುವಂತೆ ಮಾಡಿತು.

ಕೊಳಲು ವಾದನ ಹಾಗೂ ಗಾಯನದ ನಾಡಿನ ಅನನ್ಯ ಪ್ರತಿಭೆ ವಾರಿಜಾಶ್ರೀ ಅವರು ಆಯ್ಕೆ ಮಾಡಿಕೊಂಡಿದ್ದ ಕೃತಿಗಳು ಸಂಗೀತ ಪ್ರಿಯರನ್ನು ಅಚ್ಚರಿಗೆ ದೂಡಿದವು. ಮುತ್ತುಸ್ವಾಮಿ ದೀಕ್ಷಿತರ್‌, ಮೈಸೂರು ವಾಸುದೇವಾಚಾರ್ಯ, ತಂಜಾವೂರ್‌ ಕೃಷ್ಣಯ್ಯ, ವಿಂಜಮುರಿ ವರದರಾಜ ಅಯ್ಯಂಗಾರ್‌ ಸೇರಿದಂತೆ ವಾಗ್ಗೇಯಕಾರರ ಅಪರೂಪದ ಪ್ರಯೋಗಗಳನ್ನು ನೆನಪು ಮಾಡಿದವು.

ADVERTISEMENT

‘ಯಮುನಾ ಕಲ್ಯಾಣಿ’ ರಾಗದ ಆದಿತಾಳದ ಮುತ್ತುಸ್ವಾಮಿ ದೀಕ್ಷಿತರ್‌ ಅವರ ಕೃತಿ ‘ನಂದಗೋಪಾಲ ಮುಕುಂದ’ ಹಾಡಿದ್ದು, ಕೃಷ್ಣಭಕ್ತಿಯ ಪ್ರೇಮಾನುಭವವನ್ನು ನೀಡಿತು. ವಿದ್ವಾನ್‌ ಮತ್ತೂರು ಶ್ರೀನಿಧಿವಯಲಿನ್‌ನಲ್ಲಿ ಗಾಯನದ ಭಾವ ತೀವ್ರತೆಯನ್ನು ಹೆಚ್ಚಿಸಿದರು.

ನಂತರ ‘ರುದ್ರಪ್ರಿಯ’ ರಾಗದ ಖಂಡಛಾಪು ತಾಳದ ತಂಜಾವೂರ್‌ ಕೃಷ್ಣಯ್ಯ ಕೃತಿ ‘ಅಂಬ ಪರದೇವತೆ’ ಹಾಡಿದರು. ‘ಕಲ್ಪನಾಸ್ವರ’, ‘ರಾಗಾಲಾಪನೆ’ಯನ್ನು ಮೃದಂಗದಲ್ಲಿ ವಿದ್ವಾನ್‌ ಎ.ರಾಧೇಶ್‌, ಘಟಂನಲ್ಲಿ ವಿದ್ವಾನ್‌ ಶಮಿತ್‌ ಗೌಡ ಅನುಸರಿಸಿದ್ದು ಗಮನ ಸೆಳೆಯಿತು.

‘ಬೇಹಾಗ್‌’ ರಾಗದರೂ‍ಪಕ ತಾಳದಮೈಸೂರು ವಾಸುದೇವಾಚಾರ್ಯರ ಕೃತಿ ‘ಪಾಹಿ ಕೃಷ್ಣ ವಾಸುದೇವ’, ‘ಬಿಲಹರಿ’ ರಾಗದಮಿಶ್ರಛಾಪು ತಾಳದವಿಂಜಮುರಿ ವರದರಾಜ ಅಯ್ಯಂಗಾರರ ‘ನರಸಿಂಹ ನನ್ನು ಬ್ರೋವಾವ’ ಕೃತಿಗಳು ಸ್ವರಾನುಭೂತಿಯನ್ನು ನೀಡಿದವು.ಹಿಂದೋಳ ರಾಗ ತಾನ ಪಲ್ಲವಿಯನ್ನು ವಾರಿಜಾಶ್ರೀ ಪ್ರಸ್ತುತ ಪಡಿಸಿದರು.

ಕಛೇರಿಗೂ ಮೊದಲು ವಿದುಷಿ ಶ್ಯಾಮಲಾ ಪ್ರಕಾಶ್‌, ಎಲ್‌.ಶೋಭಾ ಆನಂದ್‌ ‘ಅರ್ಜುನನ ತಪಸ್ಸು’ ಕಾವ್ಯವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.