ADVERTISEMENT

ರಾಕೇಶ್‌ ಟಿಕಾಯತ್ ಮೇಲಿನ ದಾಳಿಗೆ ವ್ಯಾಪಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಮೇ 2022, 13:25 IST
Last Updated 31 ಮೇ 2022, 13:25 IST
   

ಮೈಸೂರು: ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲಿನ ದಾಳಿ ಖಂಡಿಸಿ ಮಂಗಳವಾರ ಹಲವು ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಅಖಿಲ ಭಾರತ ಕಿಸಾನ್ ಸಭಾ, ಎಐಟಿಯುಸಿ, ಸಿಪಿಐ ಜಂಟಿಯಾಗಿ ಗೋವಿಂದರಾವ್ ಸ್ಮಾರಕ ಭವನದ ಮುಂಭಾಗ, ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಗೋವಿಂದರಾವ್ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ಎಐಟಿಯುಸಿಯ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ರಾಕೇಶ್‌ ಟಿಕಾಯತ್ ಮೇಲಿನ ದಾಳಿ ಖಂಡಿಸಿ ಭವನದ ಮುಂಭಾಗ ಕಪ್ಪುಬಾವುಟವಿಡಿದು ಪ್ರತಿಭಟನೆ ನಡೆಸಿದರು.

ADVERTISEMENT

ಇದೊಂದು ಅಮಾನುಷವಾದ ದಾಳಿ. ಸರ್ಕಾರವು ಸಂಘ ಪರಿವಾರದ ಸಂಘಟನೆಗಳನ್ನು ಬಳಸಿಕೊಂಡು ಪ್ರಜಾಸತ್ತೆಯನ್ನೇ ನಾಶಗೊಳಿಸುತ್ತಿದೆ ಎಂದು ಹಲವು ಮುಖಂಡರು ಖಂಡಿಸಿದರು.

ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯಘಟಕದ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಆರ್.ಶೇಷಾದ್ರಿ, ವಿಜಯಭಾಸ್ಕರ್, ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಸಾತಿ ಸುಂದರೇಶ್‌, ಹೋರಾಟಗಾರರಾದ ರಾಮಕೃಷ್ಣ, ಎನ್.ಕೆ.ದೇವದಾಸ್ ಇದ್ದರು.

ಸರ್ಕಾರವನ್ನು ಕಿತ್ತೊಗೆಯಲು ಪ.ಮಲ್ಲೇಶ್ ಸಲಹೆ
ರಾಕೇಶ್‌ ಟಿಕಾಯತ್‌ ಮೇಲಿನ ದಾಳಿಯ ವಿರುದ್ಧ ರೈತರು ದನಿ ಎತ್ತಬೇಕು. ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಪ. ಮಲ್ಲೇಶ್ ತಿಳಿಸಿದರು.

ರೈತ, ಪ್ರಗತಿಪರ, ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಅವರು ಮಾತನಾಡಿದರು.

ಕೇವಲ ಹಸಿರು ಟವೆಲ್ ಹಾಕಿಕೊಂಡರೆ ಸಾಲದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆ ಕೇಳಬೇಕು. ಮತ್ತೆ ಇಂತಹ ಘಟನೆಗೆ ಅವಕಾಶ ಮಾಡಿಕೊಡಬಾರದು ಎಂದರು.

ಲೇಖಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ‘ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಅನಾಗರಿಕವಾದುದು’ ಎಂದು ಖಂಡಿಸಿದರು. ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೈಗೆ ಕಪ್ಪು ಪಟ್ಟಿ ಧರಿಸಿದ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.

ಜಿಲ್ಲಾಧಿಕಾರಿಯೇ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ಕಾರ್ಯಕರ್ತರು ಕಚೇರಿಯ ಮುಂಬಾಗಿಲವರೆಗೂ ಬಂದು ಕುಳಿತರು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲ್ಲ ಎಂದು ಹೇಳುವ ಮೂಲಕ ಪ್ರತಿಭಟನನಿರತರ ಮನವೊಲಿಸಿದರು.

ಲೇಖಕ ಪ್ರೊ.ಕಾಳೇಗೌಡ ನಾಗವಾರ, ಹೋರಾಟಗಾರರಾದ ಹೊಸಕೋಟೆ ಬಸವರಾಜು, ಪ್ರಸನ್ನ ಎನ್ ಗೌಡ, ಶಿವಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.