ಸಾಂದರ್ಭಿಕ ಚಿತ್ರ
- ಎ.ಐ ಚಿತ್ರ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ, ವರುಣ ಹೋಬಳಿಯ ಗುಡಮಾದನಹಳ್ಳಿ ಗ್ರಾಮದಲ್ಲಿ ಜಮೀನು ಪರಿಶೀಲನೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಡಿ.31ರಂದು ನಡೆದಿರುವ ಈ ಪ್ರಕರಣದ ವಿಡಿಯೊ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವರುಣ ಹೋಬಳಿಯ ಗುಡಮಾದನಹಳ್ಳಿಯಲ್ಲಿ ‘ನಿಮ್ಹಾನ್ಸ್ ಆಸ್ಪತ್ರೆ’ ನಿರ್ಮಿಸಲು ಸರ್ವೆ ನಂ.8ರಲ್ಲಿ 5 ಎಕರೆ 5 ಗುಂಟೆ ಹಾಗೂ ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ, ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಈ ಜಮೀನು ಪರಿಶೀಲನೆಗೆಂದು 2025ರ ಡಿ.31ರಂದು ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ.ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್‌ಕುಮಾರ್ ತೆರಳಿದ್ದರು.
ಆಗ ಜಮೀನಿನಲ್ಲಿ ಅಡಿಕೆ ತೋಟ ಮಾಡಿಕೊಂಡಿರುವ ಪುಟ್ಟಸ್ವಾಮಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ‘ಮೊದಲು ನಿಮ್ಮ ಹೆಣ ಬೀಳುತ್ತೆ’ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ಮೊಬೈಲ್ ಫೋನ್‌ನಲ್ಲಿ ವಿಡಿಯೊ ಮಾಡುತ್ತಿದ್ದ ನವೀನ್‌ಕುಮಾರ್ ಅವರಿಗೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಭವ್ಯಾ ಅವರು ನೀಡಿದ ದೂರು ಆಧರಿಸಿ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಟ್ಟಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ನೋಟಿಸ್ ಜಾರಿಗೊಳಿಸಿದ್ದರು. ಬಳಿಕ ಅವರನ್ನು ‘ಸ್ಟೇಷನ್ ಬೇಲ್’ ಮೇಲೆ ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪುಟ್ಟಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜೊತೆಗಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಈ ಘಟನೆಯ ವಿಡಿಯೊ ಬಿಜೆಪಿ ರಾಜ್ಯ ಘಟಕದಿಂದ ಫೇಸ್‌ಬುಕ್ ಮೊದಲಾದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ‘ಸಿ.ಎಂ ತವರು ಕ್ಷೇತ್ರದಲ್ಲೂ ಸರ್ಕಾರಿ ಅಧಿಕಾರಿಗೆ ರಕ್ಷಣೆ ಇಲ್ಲ!’ ಎಂದು ಟೀಕಿಸಲಾಗಿದೆ.
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆ ಬೆದರಿಕೆ ಸಾಮಾನ್ಯ ಎಂಬಂತಾಗಿದೆ. ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿ ಮೇಲೆ ಕಾಂಗ್ರೆಸ್ ನಾಯಕನ ದಬ್ಬಾಳಿಕೆ ಹಿಂದೆಯೇ ಮುಖ್ಯಮಂತ್ರಿ ಪ್ರತಿನಿಧಿಸುವ ವರುಣದಲ್ಲಿ ಹಲ್ಲೆ, ಕೊಲೆ ಬೆದರಿಕೆ ನಡೆದಿದೆ’ ಎಂದು ಬಿಜೆಪಿ ಅರೋಪಿಸಿದೆ.
‘ಗ್ರಾಮ ಆಡಳಿತಾಧಿಕಾರಿ ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಅವರಿಗೆ ನಿಂದಿಸಿ, ಕೊಲೆ ಬೆದರಿಕೆ ಹಾಕಲಾಗಿದೆ. ಸಿ.ಎಂ ತವರಲ್ಲೇ ಮಹಿಳಾ ಅಧಿಕಾರಿಗೆ ರಕ್ಷಣೆ ಇಲ್ಲವೆಂದರೆ, ರಾಜ್ಯದ ಉಳಿದೆಡೆ ಸಾಮಾನ್ಯ ಮಹಿಳೆಯರ ಗತಿಯೇನು? ಇದೇನಾ ನಿಮ್ಮ ಮಹಿಳಾ ರಕ್ಷಕ ಆಡಳಿತ’ ಎಂದೂ ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.