ADVERTISEMENT

ಕಾವೇರಿ ಪ್ರಾಧಿಕಾರದ ವಿರುದ್ಧ ಆಕ್ರೋಶ

ಕಪ್ಪು ಉಡುಪು ಧರಿಸಿ ವಾಟಾಳ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 8:38 IST
Last Updated 4 ಜೂನ್ 2019, 8:38 IST
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಸೋಮವಾರ ಕಪ್ಪು ಉಡುಪು ಧರಿಸಿ ಕರಾಳ ದಿನ ಆಚರಿಸಿದರು
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಸೋಮವಾರ ಕಪ್ಪು ಉಡುಪು ಧರಿಸಿ ಕರಾಳ ದಿನ ಆಚರಿಸಿದರು   

ಮೈಸೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಅದರ ಸೂಚನೆಯ‌ನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಇಲ್ಲಿ ಸೋಮವಾರ ಕಪ್ಪು ಉಡುಪು ಧರಿಸಿ, ಕಪ್ಪು ಧ್ವಜ ಪ್ರದರ್ಶಿಸಿ, ಕರಾಳ ದಿನ ಆಚರಿಸಿದರು.

ಇಲ್ಲಿನ ರೈಲು ನಿಲ್ದಾಣದ ಮುಂದೆ ಅವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.‌

ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಮೌನವಾಗಿರುವುದು ಸರಿಯಲ್ಲ. ಒಂದು ವೇಳೆ ಇದೇ ಮೌನ ಮುಂದುವರಿಸಿದ್ದೇ ಆದಲ್ಲಿ ಮುಂದೊಂದು ದಿನ ಇದರಿಂದ ಭಾರಿ ಅಪಾಯ ಉಂಟಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ಕೆಆರ್‌ಎಸ್‌ನಲ್ಲಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಒಳ ಹರಿವು ಇಲ್ಲವೇ ಇಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ಈ ಕುರಿತು ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ನೀರು ಬಿಟ್ಟರೆ ನಾಡಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಅವರು ಕಿಡಿಕಾರಿದರು

ಅಧಿಕಾರಿಯೊಬ್ಬರು ಗೋಡ್ಸೆಯು ಗಾಂಧೀಜಿಯವರನ್ನು ಹತ್ಯೆ ಮಾಡಿದ್ದು ಸರಿ ಎನ್ನುವ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಗಾಂಧೀಜಿ ಪ್ರತಿಮೆಗಳನ್ನು ತೆರವುಗೊಳಿಸಬೇಕು ಎಂದಿದ್ದಾರೆ. ಆ ಅಧಿಕಾರಿ ವಿರುದ್ಧ ಜೂನ್ 4ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಬಾರದು. ಮೊದಲಿನಿಂದಲೂ ಕೇಂದ್ರ ಸರ್ಕಾರಗಳು ಈ ಪ್ರಯತ್ನ ನಡೆಸುತ್ತಿವೆ. ಇದರ ವಿರುದ್ಧ ಕನ್ನಡಿಗರೆಲ್ಲರೂ ಒಂದುಗೂಡಬೇಕು ಎಂದು ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.