ADVERTISEMENT

ಧಮ್ಮದೀಕ್ಷೆ ದಿನಾಚರಣೆಯಲ್ಲಿ ಕುಲಪತಿ ಪ್ರೊ.ಹೇಮಂತ್‌ಕುಮಾರ್

ದೇಶಕ್ಕೆ ಬುದ್ಧನ ಮಾರ್ಗ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 11:31 IST
Last Updated 14 ಅಕ್ಟೋಬರ್ 2022, 11:31 IST
   

ಮೈಸೂರು: ‘ದೇಶಕ್ಕೆ ಬುದ್ಧನ ಮಾರ್ಗದ ಅಗತ್ಯವಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಲ್ಲಿ ಶುಕ್ರವಾರ ನಡೆದ ‘66ನೇ ಧಮ್ಮದೀಕ್ಷಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧ ಜಗತ್ತಿನ ಬೆಳಕು. ಆ ಗುರು‌ವನ್ನು ಒಪ್ಪುವವರು ಪರಿಶುದ್ಧವಾಗುತ್ತಾರೆ. ಅವರಿಗೆ ಭಯ, ಆಂತರಿಕ ಅಪಜಯ ಇರುವುದಿಲ್ಲ. ಅವನ ಪ್ರಜ್ಞೆ, ಕರುಣೆ, ಸಮತೆ ನಮ್ಮೆಲ್ಲರ ಬದುಕಿನ ಭಾಗವಾಗಬೇಕು’ ಎಂದು ಆಶಿಸಿದರು.

ADVERTISEMENT

ಅರಿತು ಬಾಳೋಣ:

‘ನಾವು ಜೀವಿಸುವ, ಕಾರ್ಯನಿರ್ವಹಿಸುವ ಹಾಗೂ ಸಂಚರಿಸುವ ಸ್ಥಳಗಳಲ್ಲಿ ಬುದ್ಧನ ಕರುಣೆಯನ್ನು ಬಿತ್ತಬೇಕು. ಮನುಷ್ಯನ ಉತ್ಕೃಷ್ಟ ಮನೋಭಾವದಿಂದ ಹೊರಹೊಮ್ಮುವ ಪರಿಪೂರ್ಣ ನ್ಯಾಯವೇ ಬುದ್ಧನು ಬೋಧಿಸಿದ ಧಮ್ಮ ಎಂಬ ಅಂಬೇಡ್ಕರ್ ಮಾತುಗಳನ್ನು ಅರಿತು ಬಾಳೋಣ’ ಎಂದರು.

‘ಮೈಸೂರು ವಿಶ್ವವಿದ್ಯಾಲಯವು ಬೈಲಕುಪ್ಪೆಯ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಬುದ್ಧ ಅಧ್ಯಯನ ಕೇಂದ್ರದ ಚಟುವಟಿಕೆಗಳು ಆರಂಭವಾಗಿದ್ದು, ಕೇಂದ್ರಕ್ಕೆ ₹ 10 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಸಂಸದ ವಿ.ಶ್ರೀನಿವಾಸಪ್ರಸಾದ್ ಈಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೌದ್ಧ ಅಧ್ಯಯನದಲ್ಲಿ ಮೈಸೂರು ವಿಶ್ವವಿದ್ಯಾಲಯವು ವಿಶೇಷ ಸ್ಥಾನವನ್ನು ಪಡೆದುಕೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಮಾಜವೇ ಕಾರಣ:

‘ಹಿಂದೂ ಆಗಿ ಜನಿಸಿದೆ. ಆದರೆ, ಹಿಂದೂ ಆಗಿ ಸಾಯಲಾರೆ ಎಂದು ಅಂಬೇಡ್ಕರ್‌ ಹೇಳಿದ್ದಕ್ಕೆ ಈ ಸಮಾಜವೇ ಕಾರಣ. ಯಾರಿಗೆ ಸ್ವಾಭಿಮಾನದ ಬದುಕು ಬೇಕೋ ಅವರು ಬುದ್ಧನನ್ನು ಆಪ್ಪಿಕೊಳ್ಳಬೇಕು. ಆತನ ಚಿಂತನೆಗಳು, ಮಾರ್ಗಗಳನ್ನು ಇಂದಿನ ಯುವ ಪೀಳಿಗೆಗೆ ಅರ್ಥೈಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.

‘ದುರ್ಬುದ್ಧಿ, ದುರಾಸೆ ಉಳ್ಳವರು ಮತ್ತು ಜಾತಿವಾದಿಗಳಿಗೆ ಧಮ್ಮದಲ್ಲಿ ಸ್ಥಳವಿರುವುದಿಲ್ಲ. ಆದರೆ, ಧಮ್ಮ ಸ್ವೀಕರಿಸಿದ ಮೇಲೆ ದುರ್ಬುದ್ಧಿ ಉಳ್ಳವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ದುರಾಸೆ ಉಳ್ಳವರು ಬದುಕಿನ ಸತ್ಯವನ್ನು ಕಂಡುಕೊಳ್ಳುತ್ತಾರೆ. ಜಾತಿವಾದಿಗಳು ಧಮ್ಮಕ್ಕೆ ಶರಣಾದರೆ ಮನುಷ್ಯರಾಗುತ್ತಾರೆ’ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರೊ.ಬಿ.ರಮೇಶ್ '66 ವರ್ಷಗಳ ಧಮ್ಮದೀಕ್ಷಾ ನಡಿಗೆಯ ಪ್ರಗತಿ ಮತ್ತು ಸವಾಲುಗಳು' ವಿಷಯ ಕುರಿತು ಮಾತನಾಡಿದರು.

ಬೈಲುಕುಪ್ಪೆಯ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾಲಯದ ಅನುವಾದ ವಿಭಾಗದ ನಿರ್ದೇಶಕ, ಬಿಕ್ಕು ಲೋಬ್‌ಸಂಗ್ ದೋರ್‌ಜಿ ಪಾಲ್‌ಜೋರ್ ಅಧ್ಯಕ್ಷತೆ ವಹಿಸಿದ್ದರು.

ನವೀನ್‌ಕುಮಾರ್ ಬುದ್ಧ ವಂದನೆ ಸಲ್ಲಿಸಿದರು. ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.