ADVERTISEMENT

ಮೈಸೂರು | ಸೊಪ್ಪು ಅಗ್ಗ; ತರಕಾರಿ ತುಟ್ಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 6:17 IST
Last Updated 5 ಜುಲೈ 2023, 6:17 IST
 ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೈಸೂರು: ಈ ವಾರ ನಗರದ ಮಾರುಕಟ್ಟೆಯಲ್ಲಿ ಸೊಪ್ಪಿನ ದರ ಇಳಿಕೆ ಆಗಿದ್ದರೆ, ತರಕಾರಿಗಳು ಮಾತ್ರ ತುಟ್ಟಿಯಾಗಿಯೇ ಮುಂದುವರಿದಿವೆ.

ಸದ್ಯ ಗ್ರಾಹಕರು–ವರ್ತಕರ ಗಮನವೆಲ್ಲ ಟೊಮೆಟೊದತ್ತ ತಿರುಗಿದೆ. ಮಂಗಳವಾರ ನಗರದ ಮಾರುಕಟ್ಟೆಯಲ್ಲಿ ಇದರ ಬೆಲೆ ಕೆ.ಜಿ.ಗೆ ₹100 ದಾಟಿತ್ತು. ಒಂದು ಕೆ.ಜಿ.ಗೆ ಮಧ್ಯಮ ಗಾತ್ರದ 10–12 ಕಾಯಿ ತೂಗುತ್ತಿದ್ದು, ಪುಟ್ಟ ಕಾಯಿ ಒಂದರ ಬೆಲೆಯೇ ₹10 ಇದೆ. ಟೊಮೆಟೊ ರೋಗ ಬಾಧೆ ಹಾಗೂ ಮಳೆಯ ಆತಂಕದ ಕಾರಣಕ್ಕೆ ಉತ್ಪಾದನೆ ಕುಸಿದಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿ ಮೆಣಸಿನಕಾಯಿ ಸಹ ಈ ಬಾರಿ ದುಬಾರಿ ತರಕಾರಿಗಳ ಪಟ್ಟಿ ಸೇರಿವೆ. ಈರುಳ್ಳಿ ದರ ಸದ್ಯ ಯಥಾಸ್ಥಿತಿಯಲ್ಲಿ ಇದ್ದರೆ, ಬೆಳ್ಳುಳ್ಳಿ ಮಾತ್ರ ಬೆಲೆ ಏರಿಸಿಕೊಳ್ಳುತ್ತಲೇ ಇದೆ. ಇಳಿಕೆಯತ್ತ ಮುಖ ಮಾಡಿದ್ದ ಶುಂಠಿ ಧಾರಣೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಮೆಣಸಿನಕಾಯಿಯೂ ಗ್ರಾಹಕರಿಗೆ ಖಾರವಾಗಿದೆ. ಗೆಡ್ಡೆಕೋಸು ಹಾಗೂ ನುಗ್ಗೆಕಾಯಿ ಮಾತ್ರ ಬೆಲೆ ಇಳಿಸಿಕೊಳ್ಳತೊಡಗಿವೆ.

ADVERTISEMENT

ಈ ಬಾರಿ ಸೊಪ್ಪುಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಮಂಗಳವಾರ ಎಂ.ಜಿ. ಮಾರುಕಟ್ಟೆಯ ಸೊಪ್ಪಿನ ಸಂತೆಯಲ್ಲಿ ನಾಟಿ ಕೊತ್ತಂಬರಿ ಸಣ್ಣ ಕಟ್ಟಿಗೆ ₹5 ಬೆಲೆ ಇತ್ತು. ಪುದೀನ ₹10ಕ್ಕೆ 3, ಕೀರೆ, ಕಿಲ್‌ಕೀರೆ, ದಂಟು, ಪಾಲಕ್‌ ₹10ಕ್ಕೆ 5 ರಂತೆ ಮಾರಾಟ ನಡೆಯಿತು. ಮೆಂತ್ಯ ಸೊಪ್ಪಿನ ಬೆಲೆಯಲ್ಲೂ ಇಳಿಕೆ ಆಗಿದ್ದು, ಸಣ್ಣ ಕಟ್ಟು ₹10ಕ್ಕೆ 3ರಂತೆ ಮಾರಾಟವಾಯಿತು.

ಈ ವಾರ ಹಣ್ಣುಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಮಾವಿನ ಋತು ಮುಗಿಯುತ್ತ ಬಂದಿದ್ದು, ಹಣ್ಣಿನ ಆವಕ ಕಡಿಮೆ ಆಗುತ್ತಿದೆ. ನೇರಳೆ ಬೆಲೆ ಕಳೆದ ವಾರ ಇಳಿಕೆ ಆಗಿತ್ತು. ಈ ವಾರ ಮತ್ತೆ ಕೆ.ಜಿ.ಗೆ ₹50 ರಷ್ಟು ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.