ADVERTISEMENT

ಮೈಸೂರು: ತರಕಾರಿಗಳ ಸಗಟು ಧಾರಣೆಯಲ್ಲಿ ಇಳಿಕೆ

ನಿರಾಶಗೊಂಡ ರೈತರು; ಚಿಲ್ಲರೆ ಧಾರಣೆಯಲ್ಲಿ ಕಾಣದ ಬೆಲೆ ಇಳಿಕೆ

ಕೆ.ಎಸ್.ಗಿರೀಶ್
Published 10 ನವೆಂಬರ್ 2020, 9:17 IST
Last Updated 10 ನವೆಂಬರ್ 2020, 9:17 IST
ಎಲೆಕೋಸು
ಎಲೆಕೋಸು   

ಮೈಸೂರು: ಈ ವಾರ ಸಗಟು ಮಾರು ಕಟ್ಟೆಯಲ್ಲಿ ಬಹುತೇಕ ಎಲ್ಲ ತರಕಾರಿಗಳ ಧಾರಣೆ ದಿಢೀರನೇ ಕುಸಿದಿದೆ. ಶೇ 50ರಿಂದ 60ರಷ್ಟು ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ರೈತರು ನಿರಾಶ ಗೊಂಡಿದ್ದಾರೆ. ಬೆಲೆ ಇಳಿಕೆ ಎಲ್ಲಿಯವರೆಗೆ ಎಂಬುದು ಯಕ್ಷಪ್ರಶ್ನೆ ಎನಿಸಿದೆ.

ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನವೆಂಬರ್ ತಿಂಗಳ ಆರಂಭದಲ್ಲಿ ಬೀನ್ಸ್‌ ಸಗಟು ಧಾರಣೆ ಕೆ.ಜಿಗೆ ₹ 25 ಇತ್ತು. ಸೋಮವಾರ ಇದು ₹ 10ಕ್ಕೆ ಕುಸಿದಿದೆ. ಭಾನುವಾರ ₹ 9ಕ್ಕೆ ಇಳಿದಿತ್ತು. ಆವಕದಲ್ಲಿ ಹೆಚ್ಚಳವಾಗಿಲ್ಲದೇ ಇದ್ದರೂ ಬೇಡಿಕೆ ಕಡಿಮೆಯಾದ್ದರಿಂದ ಬೆಲೆ ಕಡಿಮೆಯಾಗಿದೆ.

ಎಲೆಕೋಸಿನ ಸಗಟು ಧಾರಣೆ ಕೆ.ಜಿಗೆ ₹ 35ರಿಂದ ₹ 16ಕ್ಕೆ ಹಾಗೂ ಹೂಕೋಸು ₹ 22ರಿಂದ 14ಕ್ಕೆ ಕಡಿಮೆಯಾಗಿದೆ. ಅರ್ಧದಷ್ಟು ಬೆಲೆಯಲ್ಲಿ ಇಳಿಕೆಯಾಗಿರುವುದು ಬೆಳೆಗಾರರಿಗೆತೀವ್ರ ನಿರಾಸೆ ಉಂಟು ಮಾಡಿದೆ.

ADVERTISEMENT

ಕ್ಯಾರೆಟ್ ಬೆಲೆಯು ಕೆ.ಜಿಗೆ ₹ 60ರಿಂದ ₹ 40ಕ್ಕೆ ಕಡಿಮೆಯಾಗಿದ್ದರೆ, ಬದನೆ ₹ 14ರಿಂದ 10, ಹಸಿಮೆಣಸಿನಕಾಯಿ ₹ 25ರಿಂದ 22 ಹಾಗೂ ದಪ್ಪಮೆಣಸಿನಕಾಯಿ ₹ 35ರಿಂದ 27ಕ್ಕೆ ಕುಸಿತ ಕಂಡಿವೆ.

ಚಿಲ್ಲರೆ ಬೆಲೆಯಲ್ಲಿ ಕಾಣದ ಇಳಿಕೆ

ಒಂದು ವಾರದಲ್ಲಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈ ಪರಿ ಬೆಲೆ ಇಳಿಕೆಯಾಗಿದ್ದರೆ, ಇತ್ತ ನಗರದ ವಿವಿಧ ಮಾರುಕಟ್ಟೆಗಳ ಚಿಲ್ಲರೆ ಬೆಲೆಗಳಲ್ಲಿ ಹೆಚ್ಚಿನ ಇಳಿಕೆ ಉಂಟಾಗಿಲ್ಲ. ಇದರಿಂದ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ. ಎಲ್ಲ ಲಾಭವೂ ಮಧ್ಯವರ್ತಿಗಳ ಪಾಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಶಿವಮಾದು, ‘ಒಂದೇ ವಾರದಲ್ಲಿ ಬೆಲೆ ಇಳಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಕೇರಳ ಸೇರಿದಂತೆ ಹೊರರಾಜ್ಯದವರಿಂದ ಮೊದಲಿನಷ್ಟು ಬೇಡಿಕೆ ವ್ಯಕ್ತವಾಗುತ್ತಿಲ್ಲ. ದೀಪಾವಳಿ ಸಮಯದಲ್ಲಿ ಬೇಡಿಕೆ ಸಿಗಬಹುದು ಎಂದು ಆಸೆ ಇದೆ’ ಎಂದು ತಿಳಿಸಿದರು.

ಇಳಿಕೆಯಾಗದ ಈರುಳ್ಳಿ ಧಾರಣೆ‌

ಈರುಳ್ಳಿ ಧಾರಣೆ ಮಾತ್ರ ಈ ವಾರವೂ ಇಳಿಕೆಯಾಗಿಲ್ಲ. ಎಪಿಎಂಸಿ ಸಗಟು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆವಕವಾಗಿಲ್ಲ. ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕೆ.ಜಿಗೆ ₹ 100 ಹಾಗೂ ಇದಕ್ಕಿಂತಲೂ ಹೆಚ್ಚಿದೆ. ಹಾಪ್‌ಕಾಮ್ಸ್‌ನಲ್ಲಿ ಇದರ ಧಾರಣೆ ₹ 100 ಇದೆ.

ಕೋಳಿಮೊಟ್ಟೆ ಬೆಲೆಯಲ್ಲಿ ಕುಸಿತ

ಕೋಳಿಮೊಟ್ಟೆಯ ಸಗಟು ಧಾರಣೆಯೂ ದಿಢೀರನೇ ಇಳಿಕೆ ಕಂಡಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 5.10 ಇತ್ತು. ಸೋಮವಾರ ಇದರ ಬೆಲೆ ₹ 4.57ಕ್ಕೆ ಕಡಿಮೆಯಾಗಿದೆ. ಭಾನುವಾರ ₹ 4.50ಕ್ಕೆ ಇಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.