ADVERTISEMENT

ಭಗವಾನ್ ಮುಖಕ್ಕೆ ಮಸಿ; ನಗರದಲ್ಲಿ ವ್ಯಾಪಕ ಖಂಡನೆ

ಮೂರು ಕಡೆ ಪ್ರತ್ಯೇಕ ಪ್ರತಿಭಟನೆ, ವಿವಿಧ ಸಂಘಟನೆಗಳಿಂದ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 3:59 IST
Last Updated 6 ಫೆಬ್ರುವರಿ 2021, 3:59 IST
ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಕೃತ್ಯ ಖಂಡಿಸಿ ಪುರಭವನದ ಮುಂಭಾಗ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು
ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಕೃತ್ಯ ಖಂಡಿಸಿ ಪುರಭವನದ ಮುಂಭಾಗ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು   

ಮೈಸೂರು: ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿದಿರುವ ಕೃತ್ಯವನ್ನು ಖಂಡಿಸಿ ಶುಕ್ರವಾರ, ನಗರದ ಮೂರು ಕಡೆ ಪ್ರತ್ಯೇಕ ಪ್ರತಿಭಟನೆಗಳು ನಡೆದವು. ಮೀರಾ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಪುರಭವನದ ಮುಂಭಾಗ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಂಗಕರ್ಮಿ ಜನಾರ್ದನ್, ‘ಇದೊಂದು ಅಂಧಾಭಿಮಾನದ ದುರ್ಘಟನೆ. ನಿರಾಶರಾಗಿ, ಹತಾಶರಾದ ಮೀರಾ ರಾಘವೇಂದ್ರ ಅವರುಹಿಂದೂ ಧರ್ಮವನ್ನೇ ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸಿರುವುದು ಬುದ್ಧಿಗೇಡಿ ವರ್ತನೆ’ ಎಂದು ಖಂಡಿಸಿದರು.

ಮಾಧ್ಯಮದವರು ಇಂತಹವರ ಬೆಂಬಲಕ್ಕೆ ನಿಲ್ಲಬಾರದು ಎಂದು ಮನವಿ ಮಾಡಿದರು.

ADVERTISEMENT

ಹೋರಾಟಗಾರರಾದ ಪ.ಮಲ್ಲೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಸ್ವರಾಜ್ ಇಂಡಿಯಾ ಪಕ್ಷದ ಪುನೀತ್‌ ಸೇರಿದಂತೆ ಹಲವರು ಇದ್ದರು.

ದಸಂಸ ಪ್ರತಿಭಟನೆ

ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪುರಭವನದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು, ‘ಇದೊಂದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಬಾರ್ ಕೌನ್ಸಿಲ್ ಸದಸ್ಯತ್ವದಿಂದ ಇವರನ್ನು ತಕ್ಷಣ ವಜಾಗೊಳಿಸಬೇಕು. ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು’ ಎಂದು ಆಗ್ರಹಿಸಿದರು.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಮೈಸೂರು ನಗರ ಘಟಕದ ಅಧ್ಯಕ್ಷ ಅಮ್ಜದ್ ಖಾನ್, ಸ್ವರಾಜ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ಉಗ್ರನರಸಿಂಹೇಗೌಡ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ, ಮುಖಂಡರಾದ ನಾಗನಹಳ್ಳಿ ಚಂದ್ರು, ಅರಸನಕೆರೆ ಶಿವರಾಜು, ಮುಳ್ಳೂರು ಪ್ರಕಾಶ್, ಸಣ್ಣಯ್ಯ ಪ್ರತಿಭಟನೆಯಲ್ಲಿದ್ದರು.

ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರಿನ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ವತಿಯಿಂದ ನಡೆದ ಮೌನ ಪ್ರತಿಭಟನೆಯಲ್ಲಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸಲಾಯಿತು.

ಸಂಶೋಧಕರ ಸಂಘದ ಅಧ್ಯಕ್ಷ ಎಸ್.ಮರಿದೇವಯ್ಯ ಹಾಗೂ ಮುಖಂಡ ಮಹೇಶ್ ಸೋಸಲೆ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.