ADVERTISEMENT

ಮಾಸ್ಕ್ ಧರಿಸದವರ ಮೇಲೆ ಪೊಲೀಸರ ನಿಗಾ

ನಗರ ಪೊಲೀಸರಿಂದ ಕಾರ್ಯಾಚರಣೆ: ಒಂದೇ ದಿನ ₹ 1.90 ಲಕ್ಷ ದಂಡ ವಸೂಲು, ಸಾರ್ವಜನಿಕರಿಗೆ ತಿಳಿವಳಿಕೆ

ಕೆ.ಎಸ್.ಗಿರೀಶ್
Published 9 ನವೆಂಬರ್ 2020, 7:23 IST
Last Updated 9 ನವೆಂಬರ್ 2020, 7:23 IST
ದೇವರಾಜ ಠಾಣೆಯ ಸಂಚಾರ ಇನ್‌ಸ್ಪೆಕ್ಟರ್ ಮುನಿಯಪ್ಪ ಅವರು ಚಿಕ್ಕಗಡಿಯಾರದ ಬಳಿಯ ವ್ಯಾಪಾರಸ್ಥರಲ್ಲಿ ಮಾಸ್ಕ್‌ ಅನ್ನು ಸಮರ್ಪಕವಾಗಿ ಹಾಕುವ ಕುರಿತು ಈಚೆಗೆ ಅರಿವು ಮೂಡಿಸಿದರು
ದೇವರಾಜ ಠಾಣೆಯ ಸಂಚಾರ ಇನ್‌ಸ್ಪೆಕ್ಟರ್ ಮುನಿಯಪ್ಪ ಅವರು ಚಿಕ್ಕಗಡಿಯಾರದ ಬಳಿಯ ವ್ಯಾಪಾರಸ್ಥರಲ್ಲಿ ಮಾಸ್ಕ್‌ ಅನ್ನು ಸಮರ್ಪಕವಾಗಿ ಹಾಕುವ ಕುರಿತು ಈಚೆಗೆ ಅರಿವು ಮೂಡಿಸಿದರು   

ಮೈಸೂರು: ಮಾಸ್ಕ್ ಧರಿಸದೆ ಸಂಚರಿಸುವವರ ಮೇಲೆ ಹದ್ದಿನಕಣ್ಣು ನೆಟ್ಟಿರುವ ನಗರ ಪೊಲೀಸರು ಶನಿವಾರ ಒಂದೇ ದಿನ1,024 ಮಂದಿಗೆ, ಒಟ್ಟು ₹ 1.90 ಲಕ್ಷ ದಂಡ ವಿಧಿಸಿದ್ದಾರೆ.‌ ಸಿದ್ಧಾರ್ಥ ನಗರ ಸಂಚಾರ ಠಾಣೆ ಪೊಲೀಸರು 84 ಮಂದಿಯಿಂದ ₹ 19,800 ದಂಡ ವಸೂಲು ಮಾಡಿದ್ದಾರೆ.

ಉಳಿದಂತೆ, ಉದಯಗಿರಿ ಪೊಲೀಸರು ₹ 15,500, ದೇವರಾಜ ಸಂಚಾರ, ಲಷ್ಕರ್ ಹಾಗೂ ದೇವರಾಜ ಠಾಣಾ ವ್ಯಾಪ್ತಿಯಲ್ಲಿ ತಲಾ ₹ 13,250 ಮೊತ್ತದಷ್ಟು ದಂಡ ವಿಧಿಸಿದ್ದಾರೆ. ವಿ.ವಿ ಪುರಂ, ನಜರ್‌ಬಾದ್, ಆಲನಹಳ್ಳಿ, ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಗಳಲ್ಲಿ ₹ 10 ಸಾವಿರಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಸಂಚರಿಸು ವವರು, ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಮಾಸ್ಕ್ ಧರಿಸದೇ ಇರುವುದಕ್ಕೆ ಪೊಲೀಸರು ₹ 250ರವರೆಗೂ ದಂಡ ವಿಧಿಸುತ್ತಿದ್ದಾರೆ.

ADVERTISEMENT

ಜುಲೈನಿಂದ ಇಲ್ಲಿವರೆಗೆ ₹ 39.79 ಲಕ್ಷ ದಂಡ!: ಜುಲೈ 8ರಿಂದ ಇಲ್ಲಿಯವರೆಗೆ ಪೊಲೀಸರು 17,177 ಪ್ರಕರಣಗಳನ್ನು ದಾಖಲಿಸಿ ₹ 39.79 ಲಕ್ಷ ದಂಡವನ್ನು ವಸೂಲು ಮಾಡಿದ್ದಾರೆ. ಇದರಲ್ಲಿ ಸಿದ್ಧಾರ್ಥ ಸಂಚಾರ ಠಾಣೆಯ ಪೊಲೀಸರು 1,680 ‍ಪ್ರಕರಣಗಳನ್ನು ದಾಖಲಿಸಿ ₹ 4.14 ಲಕ್ಷ ದಂಡ ವಸೂಲು ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.‌ ದೇವರಾಜ ಠಾಣಾ ಪೊಲೀಸರು ₹ 2.85 ಲಕ್ಷ ದಂಡ ವಿಧಿಸಿ, 2ನೇ ಸ್ಥಾನದಲ್ಲಿದ್ದಾರೆ.

ಎಲ್ಲ ಠಾಣೆಯ ಪೊಲೀಸರು, ಸಂಚಾರ ಪೊಲೀಸರು ಮಾಸ್ಕ್ ಧರಿಸದ ವರಿಂದ ದಂಡ ವಸೂಲು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ದಂಡ ಹಾಕುವುದು ಹೆಚ್ಚಾದರೆ ಜನರು ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸುತ್ತಾರೆ. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂಬುದು ಪೊಲೀಸರ ಲೆಕ್ಕಾಚಾರ.

ಸಮರ್ಪಕವಾಗಿ ‘ಮಾಸ್ಕ್’ ಹಾಕದ ಸಾರ್ವಜನಿಕರು: ಪೊಲೀಸರ ಭಯಕ್ಕೆ ಮಾಸ್ಕ್ ಧರಿಸುವ ಬಹಳಷ್ಟು ಮಂದಿ ಸಮರ್ಪಕವಾಗಿ ಮಾಸ್ಕ್ ಧರಿಸದೇ ಓಡಾಡುವುದು ಎಲ್ಲೆಡೆ ಕಂಡು ಬರುತ್ತಿದೆ. ಮೂಗಿನಿಂದ ಕೆಳಗೆ, ಕೇವಲ ಗದ್ದಕ್ಕೆ ಮಾತ್ರವಷ್ಟೇ ಮಾಸ್ಕ್ ಹಾಕಿರುತ್ತಾರೆ. ಎಲ್ಲೆಂದರಲ್ಲಿ ಉಗುಳುವವರಿಗೇನೂ ಕಡಿಮೆ ಇಲ್ಲ. ಪೊಲೀಸರು ಇಂಥವರ ಮೇಲೂ ನಿಗಾ ಇರಿಸಿ, ತಿಳಿವಳಿಕೆ ನೀಡಬೇಕಿದೆ ಎಂಬುದು ಸಾರ್ವಜನಿಕರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.