ADVERTISEMENT

ಕೆ.ಆರ್.ನಗರ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

ಸ್ಮಶಾನ ಒತ್ತುವರಿ; ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 7:51 IST
Last Updated 17 ಮಾರ್ಚ್ 2023, 7:51 IST
ಕೆ.ಆರ್.ನಗರ ತಾಲ್ಲೂಕಿನ ನಾರಾಯಣಪುರದಲ್ಲಿ ಗುರುವಾರ ರಸ್ತೆಯಲ್ಲೇ ಶವವಿಟ್ಟುಕೊಂಡು ಪ್ರತಿಭಟಿಸಿದ ಮಹಿಳೆಯರು
ಕೆ.ಆರ್.ನಗರ ತಾಲ್ಲೂಕಿನ ನಾರಾಯಣಪುರದಲ್ಲಿ ಗುರುವಾರ ರಸ್ತೆಯಲ್ಲೇ ಶವವಿಟ್ಟುಕೊಂಡು ಪ್ರತಿಭಟಿಸಿದ ಮಹಿಳೆಯರು   

ಕೆ.ಆರ್.ನಗರ: ತಾಲ್ಲೂಕಿನ ನಾರಾಯಣಪುರದಲ್ಲಿ ಗುರುವಾರ ಸರ್ಕಾರಿ ಜಾಗಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ ತಾರಕಕ್ಕೇರಿದ್ದರಿಂದ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಲಾಗಿದೆ.

ನಾರಾಯಣಪುರದ ಮಂಜುನಾಯಕ ಮೃತಪಟ್ಟಿದ್ದರು. ಪರಿಶಿಷ್ಟ ಪಂಗಡದ ಸ್ಮಶಾನ ಒತ್ತುವರಿಯಾಗಿದೆ‌. ಅಲ್ಲಿ ತೆಂಗಿನ ಮರಗಳಿವೆ. ಪಂಚಾಯಿತಿಯವರು ತೆರವುಗೊಳಿಸದಿದ್ದರಿಂದ ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು, ಸಮುದಾಯದವರು, ನೆಂಟರು ಶವ ಹೊತ್ತೊಯ್ಯುತ್ತಿದ್ದರು.

ಈ ವಿಷಯ ತಿಳಿದೊಡನೆ ಮತ್ತೊಂದು ಕೋಮಿನ ಜನ ಅಂತಿಮ ಯಾತ್ರೆ ತಡೆದರು. ಶವ ಹೂಳಲು ಗುಂಡಿ ತೆಗೆದಿರುವ ಜಾಗವನ್ನು ಈಗಾಗಲೇ ಆಶ್ರಯ ನಿವೇಶನಕ್ಕೆ ಗುರುತಿಸಲಾಗಿದೆ. ಮಂಜೂರು ಸಹ ಆಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶವ ಹೂಳಲು ಇಲ್ಲಿ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ಕುಳಿತರು.

ADVERTISEMENT

ನಮಗೆ ಸ್ಮಶಾನವೂ ಇಲ್ಲ. ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಾವು ಸರ್ಕಾರಿ ಜಾಗದಲ್ಲೇ ಶವಸಂಸ್ಕಾರ ನಡೆಸುತ್ತೇವೆ ಎಂದು ಮೃತರ ಸಂಬಂಧಿಕರು ರಸ್ತೆಯಲ್ಲೇ ಶವವಿಟ್ಟುಕೊಂಡು ಪ್ರತಿಭಟಿಸಿದರು. ಎರಡೂ ಗುಂಪಿನ ನಡುವೆ ವಾಗ್ವಾದ ನಡೆಯಿತು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಸುದ್ದಿ ತಿಳಿದೊಡನೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ತಾಲ್ಲೂಕು ಆಡಳಿತದ ಅಧಿಕಾರಿಗಳು ಎರಡೂ ಗುಂಪಿನ ಮನವೊಲಿಕೆಗೆ ಯತ್ನಿಸಿದರೂ ತಡರಾತ್ರಿಯವರೆಗೂ ಯಾರೊಬ್ಬರೂ ಪಟ್ಟು ಸಡಿಸಲಿಲ್ಲ. ರಸ್ತೆಯಲ್ಲೇ ಶವವಿಟ್ಟು ಪ್ರತಿಭಟಿಸಿದ್ದರಿಂದ ಈ ಮಾರ್ಗದಲ್ಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.