ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಶುಕ್ರವಾರ ನಡೆದ ‘ಸಸ್ಯ ಪೋಷಕಾಂಶ’ ಕುರಿತ ವಿಚಾರ ಸಂಕಿರಣದಲ್ಲಿ ಸಂಸ್ಥೆಯ ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿದ ಮ್ಯಾಕ್‌ಡೊನಾಲ್ಡ್ ‘ಪ್ರೋಟಿನ್ ಸ್ಲೈಸ್’ ಅನ್ನು ನಿರ್ದೇಶಕಿ ಪ್ರೊ.ಶ್ರೀದೇವಿ ಅನ್ನಪೂರ್ಣ ಸಿಂಗ್ ಬಿಡುಗಡೆ ಮಾಡಿದರು.
ಮೈಸೂರು: ‘ವೈರಲ್ ಸೋಂಕಿನಿಂದ ದೇಶದ ಶೇ 10ರಿಂದ 30ರಷ್ಟು ಕೃಷಿ ಬೆಳೆಗಳ ಇಳುವರಿ ಕುಸಿತ ಕಾಣುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಪ್ರೊ.ಎಚ್.ಎಸ್.ಸಾವಿತ್ರಿ ಹೇಳಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಸ್ಯ ಪೋಷಕಾಂಶ: ಮಾನವ ಪೌಷ್ಟಿಕತೆ ಮತ್ತು ತಾಂತ್ರಿಕ ನಾವಿನ್ಯತೆ’ ಕುರಿತ ಅಮೃತ ಮಹೋತ್ಸವ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಸಸ್ಯ ಪೋಷಕಾಂಶಗಳ ಮೇಲೆ ವೈರಲ್ ಸೋಂಕು ಪರಿಣಾಮ ಬೀರುತ್ತಿದೆ’ ಎಂದರು.
‘ಜಾಗತಿಕ ಬೆಳೆ ನಷ್ಟದಲ್ಲಿ ಅರ್ಧದಷ್ಟು ಪ್ರಮಾಣ ದೇಶದ ಕೃಷಿಯಲ್ಲಿ ಆಗುತ್ತಿದೆ. ಬಾಳೆ, ಭತ್ತ, ಟೊಮೆಟೊ, ಹತ್ತಿ, ನೆಲಗಡಲೆ ಹೆಚ್ಚು ಸೋಂಕಿಗೆ ತುತ್ತಾಗುತ್ತಿವೆ’ ಎಂದು ಮಾಹಿತಿ ನೀಡಿದರು.
‘ವೈರಲ್ ಪೋಟಿನ್‌ಗಳು ಬಹುಕಾರ್ಯವಿಧಾನ ಒಳಗೊಂಡಿದ್ದು, ಅವುಗಳ ವಿನ್ಯಾಸ, ಕಾರ್ಯವೈಖರಿಯನ್ನು ಸದಾ ಬದಲಿಸುತ್ತಿರುತ್ತವೆ. ಅವುಗಳನ್ನು ಹತೋಟಿಗೆ ತರಬೇಕೆಂದರೆ ಸಂಶೋಧನೆಯನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.
ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ ಪ್ರೊ.ವಿ.ಪ್ರಕಾಶ್ ಮಾತನಾಡಿ, ‘ಜಗತ್ತಿನಲ್ಲಿ ಶಿಶು ಆಹಾರ ಮತ್ತು ಸಿದ್ಧಪಡಿಸಿದ ಆಹಾರ ಎರಡನ್ನೂ ಆವಿಷ್ಕರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆ ಸಿಎಫ್‌ಟಿಆರ್‌ಐಗೆ ಇದೆ. ದೇಶವಷ್ಟೇ ಅಲ್ಲ ಜಗತ್ತಿನ ಆಹಾರ ತಂತ್ರಜ್ಞಾನ, ಸ್ವಾವಲಂಬನೆಯಲ್ಲೂ ಸಂಸ್ಥೆಯ ಕೊಡುಗೆ ಹಿರಿದಾಗಿದೆ’ ಎಂದರು.
‘ನ್ಯೂಜಿಲೆಂಡ್‌ನಿಂದ ಶಿಶು ಆಹಾರವನ್ನು ಆಮದು ಮಾಡಿಕೊಳ್ಳಲಾಗಿತ್ತು. ಅದು ಬರುವುದು ತಪ್ಪಿದಾಗ, ಪೌಷ್ಟಿಕ ಅಟ್ಟ, ಮೈಸೂರ್ ಫ್ಲೋರ್, ರೈಸ್ ಬ್ರಾನ್ ಸೇರಿದಂತೆ ನೂರಾರು ಆವಿಷ್ಕಾರಗಳು ಸಂಸ್ಥೆಯಿಂದ ಹೊಮ್ಮಿದವು. ಆಹಾರೋದ್ಯಮದಲ್ಲಿ ಕ್ರಾಂತಿ ಆಗಲು ಕಾರಣವಾಯಿತು’ ಎಂದು ಹೇಳಿದರು.
‘ಸಸ್ಯ ಪೋಷಕಾಂಶಗಳನ್ನು ಸಿದ್ಧ ಆಹಾರವಾಗಿಸುವ ತಂತ್ರಜ್ಞಾನವನ್ನು ಸಂಸ್ಥೆಯೇ ಅಭಿವೃದ್ಧಿ ನಡೆದಿದೆ. ಸಿರಿಧಾನ್ಯ ಆಹಾರಗಳು ಮತ್ತೆ ಜನಪ್ರಿಯವಾಗಲು ಹೊಸ ತಿನಿಸುಗಳನ್ನು ತಯಾರಿಸಿದೆ. ವೇಗನ್ ಮಿಲ್ಕ್ ಹೊಸ ಪೇಯವಾಗಿದ್ದು, ಆಸ್ಪತ್ರೆಗಳಲ್ಲೂ ನೀಡಲಾಗುತ್ತಿದೆ’ ಎಂದರು.
ನಿರ್ದೇಶಕಿ ಪ್ರೊ.ಶ್ರೀದೇವಿ ಅನ್ನಪೂರ್ಣ ಸಿಂಗ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.