ಮೈಸೂರು: ದಿವಂಗತ ನಟ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಅಂಗವಾಗಿ ಉದ್ಭೂರು ಸಮೀಪದ ವಿಷ್ಣು ಸ್ಮಾರಕದಲ್ಲಿ ಗುರುವಾರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ನೆಚ್ಚಿನ ನಟನಿಗೆ ದೊರೆತ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿಯ ಬಗ್ಗೆ ಕೊಂಡಾಡಿದರು.
ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಮೊಮ್ಮಗ ಜೇಷ್ಠ ವರ್ಧನ್ ಆಗಮಿಸಿ ವಿಷ್ಣು ಪ್ರತಿಮೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಅಭಿಮಾನಿಗಳು ವಿಷ್ಣುವರ್ಧನ್‌ಗೆ ಜಯಘೋಷ ಹಾಕಿದರು.
ಮೈಸೂರು ರತ್ನ ವಿಷ್ಣುವರ್ಧನ್ ಸ್ಮಾರಕ ಅಭಿಮಾನಿಗಳ ಒಕ್ಕೂಟವು ಬೆಳಿಗ್ಗಿನಿಂದಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಲಯನ್ಸ್, ಇನ್ನರ್ ವೀಲ್ ಕ್ಲಬ್ ಹಾಗೂ ಜೀವಾಧಾರ ರಕ್ತನಿಧಿ ಕೇಂದ್ರವು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅನೇಕ ಯುವಕರು ರಕ್ತದಾನ ಮಾಡಿದರು. ರಾಯಚೂರಿನ ಮಲ್ಲಪ್ಪ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಹಲವರು ವಿಷ್ಣುವರ್ಧನ್ ರೀತಿಯಲ್ಲೇ ವೇಷಭೂಷಣ ತೊಟ್ಟು ಮಿಂಚಿದರು. ತಲೆಗೆ ಬಿಳಿ ವಸ್ತ್ರ, ಕೂಲಿಂಗ್ ಗ್ಲಾಸ್ ಹಾಕಿ, ಎಡ ಕೈಯಲ್ಲಿರುವ ಕಡಗವನ್ನು ತಿರುವುತ್ತಾ ಫೊಟೊ ತೆಗೆಸಿಕೊಂಡರು. ಸ್ಮಾರಕದ ಸುತ್ತಲೂ ಇರುವ ವಿಷ್ಣುವರ್ಧನ್ ಜೀವನದ ಪ್ರಮುಖ ಘಟ್ಟಗಳ ಫೊಟೊಗಳನ್ನು ವೀಕ್ಷಿಸಿ ನೆನಪು ಹಂಚಿಕೊಂಡರು.
ಮೈಸೂರಿನ ಜ್ಯೋತಿನಗರದ ಮಹೇಶ್ ತನ್ನ ಆಟೊ ರಿಕ್ಷಾದ ತುಂಬೆಲ್ಲಾ ವಿಷ್ಣುವರ್ಧನ್ ಭಾವಚಿತ್ರಗಳ ಸ್ಟಿಕ್ಕರ್ ಅಂಟಿಸಿದ್ದರು. ಮುಂಭಾಗದಲ್ಲಿ ವಿಷ್ಣುವರ್ಧನ್ ದಂಪತಿ ಫೊಟೊ ಹಾಕಿಸಿ ‘ಯಜಮಾನ್ರು’ ಎಂಬ ತಲೆಬರಹ ಅಂಟಿಸಿದ್ದು, ಅಭಿಮಾನಿಗಳು ಅದರೊಂದಿಗೆ ಫೊಟೊ ತೆಗೆಸಿಕೊಂಡರು.
ವಿಷ್ಣು ಗ್ರೂಪ್ ತಂಡದ ಸದಸ್ಯರು ವಿಷ್ಣುವರ್ಧನ್ ಅಭಿನಯದ ಚಿತ್ರಗೀತೆಗಳನ್ನು ಹಾಡಿದರು. ತಮ್ಮಿಷ್ಟದ ಹಾಡುಗಳಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು. ಬಳಿಕ ಆಗಮಿಸಿದ ಎಲ್ಲರಿಗೂ ಬಾಳೆ ಎಲೆ– ಒಬ್ಬಟ್ಟಿನ ಹಬ್ಬದೂಟ ಉಣಬಡಿಸಿದರು.
10 ಗುಂಟೆ ಜಾಗಕ್ಕೆ ಮನವಿ: ‘ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲು 10 ಗುಂಟೆ ಜಾಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಜಾಗ ದೊರೆತರೆ ಕುಟುಂಬದವರೇ ಮಂಟಪ ನಿರ್ಮಿಸುತ್ತೇವೆ’ ಎಂದು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ‘ಕುಟುಂಬದ ಸದಸ್ಯರ ಬಗ್ಗೆ ತಿಳಿಯದವರು, ಅಭಿಮಾನಿ ಗಳೆಂಬ ಮುಖವಾಡ ಧರಿಸಿ ನಮ್ಮ ಮಧ್ಯೆಯೇ ಇರುವವರು ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ. ಮುಂದೆ ಇದು ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ರತ್ನ ಪ್ರಶಸ್ತಿಗೆ, ಸ್ಮಾರಕ ನಿರ್ಮಾಣದ ಹಿಂದೆ ಕುಟುಂಬದ ಶ್ರಮವಿದೆ. ಇವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.
‘ವಿಷ್ಣುವರ್ಧನ್ ಅಭಿಮಾನಿಗಳು ಧೈರ್ಯವಂತರು ಸುಸಂಸ್ಕೃತರು. ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನಿಮಗೆ ಅನುಮಾನಗಳಿದ್ದರೆ ನೇರವಾಗಿ ನಮ್ಮ ಮನೆಗೆ ಬನ್ನಿ ಅನಿರುದ್ಧ್ ನಿಮ್ಮ ಸಂಶಯ ಸರಿಪಡಿಸುತ್ತಾರೆ’ ಎಂದು ಭಾರತಿ ಮನವಿ ಮಾಡಿದರು. ‘ಯಜಮಾನರಿಗೆ ಕರ್ನಾಟಕ ಗೌರವ ದೊರೆತಿರುವುದಕ್ಕೆ ದೇವರಿಗೆ ಎಷ್ಟು ನಮಸ್ಕಾರ ಹೇಳಿದರೂ ಸಾಲದು. ಸರ್ಕಾರಕ್ಕೆ ನಾವು ಚಿರಋಣಿ. ಅವರ ಮಾತಿನಂತೆ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಉತ್ತಮ ದಾರಿಯಲ್ಲಿ ನಡೆದರೆ ಒಳ್ಳೆಯದಾಗುತ್ತದೆ. ಇದೇ ಪ್ರೀತಿ ಮೊಮ್ಮಗ ಜೇಷ್ಠನ ಮೇಲೂ ಇರಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.