
ತಿ. ನರಸೀಪುರ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ಧರ್ಮ ಜಾಗೃತಿ ವೇದಿಕೆ ಹಾಗೂ ತಾಲ್ಲೂಕಿನ ಶ್ರೀ ರಾಮಕೃಷ್ಣ ಸೇವಾ ಕೇಂದ್ರದ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವಮಾನವ ಧರ್ಮ ಮೊದಲ ಮಹಾ ಅಧಿವೇಶನಕ್ಕೆ ಬನ್ನೂರು ಹೋಬಳಿಯ ಯಾಚೇನಹಳ್ಳಿ ಸಾಕ್ಷಿಯಾಯಿತು.
ಜಗತ್ತಿನಲ್ಲಿ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರಲ್ಲ. ಎಲ್ಲರೂ ಒಂದೇ ಎಂಬ ಸಂದೇಶ ಸಾರುವ ವಿಶ್ವಮಾನವ ಧರ್ಮದ ಮೊದಲ ಮಹಾಧಿವೇಶನವನ್ನು ತಟ್ಟೆಯಲ್ಲಿದ್ದ ಮಣ್ಣಿನಲ್ಲಿಟ್ಟಿದ್ದ ಸಣ್ಣ ನೇಗಿಲಿನಿಂದ ಉಳುಮೆ ಮಾಡುವ ಮೂಲಕ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷಾನಂದ ಸ್ವಾಮೀಜಿ ಚಾಲನೆ ನೀಡಿದರು.
ವಿಶ್ವಮಾನವ ಧರ್ಮದ ಮೊದಲ ಅಧಿವೇಶನದಲ್ಲಿ ವಿಶ್ವದ ಮಾನವ ಧರ್ಮ ಜಾಗೃತಿ ವೇದಿಕೆಯ ಅಧ್ಯಕ್ಷ ಮುಕುಂದರಾಜ್ ಮೊದಲಿಗೆ ಪ್ರಸ್ತಾಪಿಸಿ, ‘ಧರ್ಮ ಎಂದರೆ ಆಚರಣೆಯಲ್ಲ, ಅದೊಂದು ಪ್ರಜ್ಞೆ. ಅದು ಮನುಷ್ಯನ ಶುದ್ಧ ನಡವಳಿಕೆ. ಆ ವಿಶ್ವ ಮಾನವ ಪ್ರಜ್ಞೆ ಮನುಷ್ಯನಲ್ಲಿ ಬೆಳೆಸಬೇಕು ಎಂಬುದೇ ವಿಶ್ವಮಾನವ ಧರ್ಮ ಅಧಿವೇಶನದ ಮೂಲ ಉದ್ದೇಶ’ ಎಂದರು.
ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದರೂ ಮಾನವ ಧರ್ಮ ಬಹಳ ಮುಖ್ಯ. ಕನ್ನಡದಲ್ಲಿ ಎರಡು ಧರ್ಮಗಳು ಇದ್ದು, ಬಸವಾದಿ ಶರಣರು ತೋರಿದ ಲಿಂಗಾಯತ ಧರ್ಮ ಹಾಗೂ ಕುವೆಂಪು ಅವರು ಬೋಧಿಸಿದ ವಿಶ್ವ ಮಾನವ ಧರ್ಮ. ಆದರೆ ನಾವು ಈ ಧರ್ಮಗಳನ್ನು ಅನುಸರಿಸುತ್ತಿಲ್ಲದಿರುವುದು ಶೋಚನೀಯ. 9ನೇ ಶತಮಾನದಲ್ಲಿ ಕವಿರಾಜಮಾರ್ಗದಲ್ಲಿ ಕನ್ನಡದ ಪ್ರಜ್ಞೆ ಪ್ರಸ್ತಾಪಿಸಲಾಗಿದೆ’ ಎಂದು ತಿಳಿಸಿದರು.
‘ಇತ್ತೀಚಿಗೆ ಸರ್ಕಾರ ನಡೆಸಿದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ 7 ಧರ್ಮಗಳಿದ್ದು, ಧರ್ಮದ 8ನೇ ಕಾಲಂನಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಸುಮಾರು 1000ಕ್ಕೂ ಅಧಿಕ ಜನ ವಿಶ್ವಮಾನವ ಧರ್ಮ ಎಂದು ನಮೂದಿಸಿದ್ದಾರೆ. ವಿಶ್ವಧರ್ಮವನ್ನು ಚಾಲನೆಗೆ ತರುವುದು ಬಹಳ ಕಷ್ಟದ ಕೆಲಸ. ಆದರೂ ನಾವೆಲ್ಲ ಚಿಂತಕರು ಒಂದು ಪ್ರಯತ್ನ ಮಾಡಿ ವಿಶ್ವಮಾನವ ಧರ್ಮವನ್ನು ಎಲ್ಲೆಡೆ ಸಾರಿ ಕುವೆಂಪು ಅವರ ಆಶಯವನ್ನು ಪ್ರಸ್ತುತಪಡಿಸುವ ಕಾರ್ಯಕ್ಕೆ ಕೈ ಹಾಕಿದ್ದೇವೆ’ ಎಂದರು.
‘ನಾದಾನಂದನಾಥ ಸ್ವಾಮೀಜಿ ಅವರು ತಮ್ಮ ಯೌವ್ವನದ ಸಮಯದಲ್ಲಿ ಕುವೆಂಪು ಅವರ ಒಡನಾಡಿಯಾಗಿದ್ದರು. ಅವರು ಕುವೆಂಪುರವರ ಸಂದೇಶಗಳನ್ನು ಸಾರುವ ಉದ್ದೇಶದಿಂದ ಕುವೆಂಪು ಅವರ ಚಿತಾಭಸ್ಮ ಸ್ಮಾರಕ ಭವನವನ್ನು ನಿರ್ಮಿಸುತ್ತಿದ್ದಾರೆ’ ಎಂದು ಹೇಳಿದರು
ವಿಶ್ವ ಮಾನವ ಧರ್ಮದ ಪ್ರಸ್ತಾಪವನ್ನು ಅನುಮೋದಿಸಿದ ಶ್ರೀ ರಾಮಕೃಷ್ಣ ಸೇವಾ ಕೇಂದ್ರದ ಸ್ವಾಮೀಜಿ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ನಾವು ಕುವೆಂಪು ಅವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. 1977ರಿಂದ ಇಲ್ಲಿ ಕುವೆಂಪು ಅವರ ಜನ್ಮದಿನಾಚರಣೆ ನಡೆಯುತ್ತಿದ್ದು, ಅವರ ವಿಶ್ವ ಮಾನವ ಸಂದೇಶಗಳನ್ನು ಮುದ್ರಿಸಿ ನೀಡಲಾಗುತ್ತಿದೆ. ಅವರ ಆಶಯದಂತೆ ಇಲ್ಲಿ ನೂರಾರು ಮಂತ್ರ ಮಾಂಗಲ್ಯಗಳು ಜರುಗಿವೆ. ಈ ನೆಲ ಐತಿಹಾಸಿಕ ಹಿನ್ನೆಲೆ ಹೊಂದಿದೆ’ ಎಂದು ತಿಳಿಸಿದರು.
‘ಕುವೆಂಪು ಚಿತಾಭಸ್ಮ ಸ್ಮಾರಕ ಭವನಕ್ಕೆ ₹10 ಲಕ್ಷದಿಂದ ಪ್ರಾರಂಭವಾಗಿ ಸರ್ಕಾರ ಈಗ ₹1.50 ಕೋಟಿ ಅನುದಾನ ನೀಡಿದೆ. ಕುವೆಂಪು ಚಿತ್ರ ಗ್ಯಾಲರಿ, ಪುಸ್ತಕ ಗ್ಯಾಲರಿ, ಉಪನ್ಯಾಸ ಸಭಾಂಗಣ ನಿರ್ಮಿಸಲಾಗುತ್ತಿದೆ. ವೈ. ಎನ್ .ಶಂಕರೇಗೌಡ ಅವರು ನಿವೇಶನ ನೀಡಿದ್ದಾರೆ’ ಎಂದು ತಿಳಿಸಿದರು.
ಅಧಿವೇಶನದ ಪರಿಕಲ್ಪನೆ ಮಂಡಿಸಿದ ಪ್ರೊ. ವಿ. ಚಂದ್ರಶೇಖರ ನಂಗಲಿ, ‘ಅಸಂಖ್ಯಾತ ಜಾತಿ ಧರ್ಮಗಳು ಇರುವ ಸತ್ಯವಾದರೆ, ಕುವೆಂಪು ಅವರ ವಿಶ್ವ ಮಾನವ ಸಂದೇಶಗಳು ಸತ್ಯಗಳಾಗಿವೆ. ವಿಶ್ವಮಾನವ ಧರ್ಮ ತಲುಪಲು ಮೂರು ಹೆಜ್ಜೆಗಳು ಬೇಕಿದ್ದು, ಮೊದಲು ವಿಶ್ವಮಾನವರಾಗಬೇಕು. ಬದ್ಧನಾದ ಮಗುವನ್ನು ಬುದ್ಧನಾಗಿಸುವುದೇ ಶಿಕ್ಷಣ’ ಎಂದರು.
‘ಕುವೆಂಪು ಅವರು ಮನುಷ್ಯ ಕೇಂದ್ರಿತ ಲೇಖಕರಲ್ಲ. ಅವರು ಜೀವಕೇಂದ್ರಿತ ಲೇಖಕರು. ಅವರು ಪೂರ್ಣ ದೃಷ್ಟಿಯುಳ್ಳವರು. ಕನ್ನಡ ಸಂಸ್ಕೃತಿಯ ಜೇನಸ್ (ರೋಮ್ ದೇವತೆ)’ ಎಂದು ಬಣ್ಣಿಸಿದರು.
ಅಧಿವೇಶನದಲ್ಲಿ ಫಾದರ್ ಸಾಜಿ, ಪ್ರೊ.ಶಿವನಂಜಯ್ಯ, ಜಾಣಗೆರೆ ವೆಂಕಟರಾಮಯ್ಯ, ಪುರುಷೋತ್ತಮ ದಾಸ್, ನಾರಾಯಣಸ್ವಾಮಿ ಮಾತನಾಡಿದರು. ಕೇಂಗೇರಿ ವಿಶ್ವಮಾನವ ಪೀಠದ ನಿಶ್ಚಲಾನಂದ ಸ್ವಾಮೀಜಿ, ಡಾ. ಸುನೀತಾ, ವೈ.ಎನ್.ಶಂಕರೇಗೌಡ, ವೈ.ಡಿ. ರಾಜಣ್ಣ, ಸತೀಶ್ ಗೌಡ, ಡಾ.ಟಿ. ಗೋವಿಂದರಾಜು, ಡಾ. ಭಾನುಪ್ರಕಾಶ್, ಷಣ್ಮುಖೇಗೌಡ, ಪ್ರಭಾಕರ್ ರೆಡ್ಡಿ, ಗಣೇಶ್ ಅಮೀನಗಡ, ಸುದೇಶ್, ಪ್ರೊ.ಜಯಪ್ರಕಾಶ್ ಗೌಡ, ಮಹದೇವಪ್ರಸಾದ್, ಗುಜ್ಜಾರಪ್ಪ, ಸೂರಿ, ಕೀಲಾರ ಕೃಷ್ಣೇಗೌಡ, ಶಂಕರಲಿಂಗೇಗೌಡ, ವಿಜಯ್ ಕುಮಾರ್, ಡಾ.ಪದ್ಮ ಚಿನ್ಮಯಿ, ಡಾ. ಕೆ. ಎನ್.ನಾಗೇಶ್, ಶಿಕ್ಷಕಿ ಮಂಜುಳಾ ಹಾಜರಿದ್ದರು.
ಜ್ಞಾನೇಶ್ವರ್ ಅವರ ಕುವೆಂಪು ಸಂದೇಶ ಕೃತಿಗಳ ಲೋಕಾರ್ಪಣೆ ಕುವೆಂಪು ಪುತ್ಥಳಿ ನಿರ್ಮಾಣಕ್ಕೆ ಶಿವನಂಜಯ್ಯ ಅವರಿಂದ ₹ 1ಲಕ್ಷ ದೇಣಿಗೆ ಕುವೆಂಪು ಚಿತಾಭಸ್ಮ, ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ
ವಿಶ್ವ ಸಂದೇಶ ಸಾರಿದ ಚಿತ್ರಗಳು ವೇದಿಕೆಯ ಬಲಭಾಗದಲ್ಲಿ ವಿಶ್ವ ಸಂದೇಶ ಸಾರಲು ಮಸೀದಿ ಯೇಸು ಕ್ರಿಸ್ತ ಮಹಾವೀರ ಬುದ್ಧ ಬಸವಣ್ಣ ಅಂಬೇಡ್ಕರ್ ಸ್ವಾಮಿ ವಿವೇಕಾನಂದ ಮಹಾತ್ಮಗಾಂಧಿ ರಾಮಕೃಷ್ಣ ಪರಮಹಂಸ ಪೆರಿಯಾರ್ ಶಾರದದೇವಿ ನಾರಾಯಣಗುರು ಹಾಗೂ ಮತ್ತೊಂದು ಕಡೆ ಕುವೆಂಪು ಅವರ ಹಳೆಯ ಚಿತ್ರಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.