
ಮೈಸೂರು: ಇಲ್ಲಿನ ಸಾತಗಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಲಾಗಿರುವ ‘ಯುಕ್ತಿ–2026’– ಎರಡು ದಿನಗಳ ಪ್ರಾದೇಶಿಕ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವಕ್ಕೆ ಗುರುವಾರ ವರ್ಣರಂಜಿತ ಚಾಲನೆ ದೊರೆಯಿತು.
ಉದ್ಘಾಟನಾ ಕಾರ್ಯಕ್ರಮಕ್ಕೆ ಚಲನಚಿತ್ರ ನಟ, ನಟಿಯರು ರಂಗು ತುಂಬಿದರು.
ಈ ಭಾಗದ ವಿವಿಧ 53 ಎಂಜಿನಿಯರಿಂಗ್ ಕಾಲೇಜುಗಳ 600 ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದು ತಾಂತ್ರಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಬಹುಮಾನಕ್ಕಾಗಿ ಪೈಪೋಟಿ ನೀಡಿದರು.
ಒಳ್ಳೆಯ ದಾರಿ ಆಯ್ಕೆ ಮಾಡಿಕೊಳ್ಳಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಟಿ ಧನ್ಯಾ ರಾಮ್‌ಕುಮಾರ್, ‘ಕಾಲೇಜು ಜೀವನ ಬಹಳ ಅತ್ಯುತ್ತಮವಾದ ಅವಧಿ. ಇಲ್ಲಿ ಮಾಡಿಕೊಳ್ಳುವ ಸ್ನೇಹಿತರು ಹಾಗೂ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಜೀವನವನ್ನು ರೂಪಿಸುತ್ತವೆ. ಹೀಗಾಗಿ ಒಳ್ಳೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವರಾಗಿರಬೇಕು’ ಎಂದು ಸಲಹೆ ನೀಡಿದರು.
ಚಲನಚಿತ್ರ ನಟಿ ಸೋನಲ್ ಮೊಂತೆರೋ ಮಾತನಾಡಿ, ‘ವಿದ್ಯಾರ್ಥಿ ಜೀವನದ ದಿನಗಳನ್ನು ಎಂಜಾಯ್ ಮಾಡಿ. ಗುರುಗಳು ಹಾಗೂ ಪೋಷಕರನ್ನು ಗೌರವಿಸಿ. ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಿ. ಟಾಕ್ಸಿಕ್ ರಿಲೇಷನ್‌ಶಿಪ್ ಬೇಡವೇ ಬೇಡ. ಉದ್ಯೋಗ ಹಾಗೂ ಭವಿಷ್ಯದ ಬಗ್ಗೆ ಯೋಚಿಸಿ’ ಎಂದು ತಿಳಿಸಿದರು.
ಎಂಜಾಯ್ ಮಾಡುವುದೇ ಕೆಲಸವಾಗದಿರಲಿ
ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ‘ವಿದ್ಯಾರ್ಥಿಗಳು ಎಂಜಾಯ್ ಮಾಡುವುದನ್ನೇ ಕೆಲಸ ಮಾಡಿಕೊಳ್ಳಬಾರದು. ಓದಿಗೆ ಆದ್ಯತೆ ಕೊಡಬೇಕು’ ಎಂದು ತಿಳಿಸಿದರು.
‘ಈ ಪ್ರಾದೇಶಿಕ ಕೇಂದ್ರದಲ್ಲಿ ಹಿಂದೆ ಪ್ರವೇಶಾತಿ ಕಡಿಮೆ ಇತ್ತು. ಯುಜಿ ಕೋರ್ಸ್‌ಗೆ 68 ಇದ್ದ ದಾಖಲಾತಿ ಈಗ 360ಕ್ಕೆ ಏರಿದೆ. ಎಂಬಿಎ, ಎಂಸಿಎ ದಾಖಲಾತಿಯೂ ಹೆಚ್ಚಾಗಿದೆ. ಶೇಕಡ ನೂರರಷ್ಟು ದಾಖಲಾತಿಯಾಗಿದೆ. ಇನ್ನೂ ಅವಕಾಶ ಕೊಡುವಂತೆ ಮನವಿ ಬಂದಿದೆ’ ಎಂದು ಹೇಳಿದರು.
‘ಸ್ವಚ್ಛತಾ ಸಿಬ್ಬಂದಿಯಿಂದ ಹಿಡಿದು ಕುಲಪತಿವರೆಗೂ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದರೆ ಮಾತ್ರ ವಿ.ವಿ.ಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿಯೇ ನಾವು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿಯನ್ನು ಗೌರವಿಸಿದೆವು’ ಎಂದರು.
ಅತ್ಯಂತ ಕಡಿಮೆ ಖರ್ಚಿನಲ್ಲಿ
‘ವಿಟಿಯುನಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಕೊಡುತ್ತಿದ್ದೇವೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ‘ಯುಕ್ತಿ’ ಉತ್ಸವಕ್ಕೆಂದೇ ಎಲ್ಲ ಪ್ರಾದೇಶಿಕ ಕೇಂದ್ರಗಳಿಗೆ ಒಟ್ಟು ₹ 2.50 ಕೋಟಿ ನೀಡಿದ್ದೇವೆ. ವಿದ್ಯಾರ್ಥಿಗಳು ಇಂತಹ ವೇದಿಕೆಯನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.
ವಿವಿಧ ಕೋರ್ಸ್‌ಗಳಲ್ಲಿ ರ‍್ಯಾಂಕ್ ಪಡೆದವರು ಹಾಗೂ ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯ ಪ್ರೊ.ಎಂ.ಎಸ್. ಶಿವಕುಮಾರ್, ಉತ್ಸವ ಅಯೋಜನಾ ಸಮಿತಿಯ ತಿಮ್ಮರಾಜು ಎಸ್.ಎನ್. ಹಾಗೂ ಪ್ರಸನ್ನಕುಮಾರ್ ಪಾಲ್ಗೊಂಡಿದ್ದರು.
ಸಹಾಯಕ ಪ್ರಾಧ್ಯಾಪಕ ಕುಮಾರ್ ಪಿ.ಕೆ. ನಿರೂಪಿಸಿದರು. ವಿದ್ಯಾರ್ಥಿನಿಯರಾದ ನಮಿತಾ ಹಾಗೂ ರಂಜಿತಾ ಹಾಡಿದರು. ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಎಂ. ನಂಜುಂಡಸ್ವಾಮಿ ಸ್ವಾಗತಿಸಿದರು.
ವೇದಿಕೆ ಬಳಸಿಕೊಳ್ಳಿ...
ಚಲನಚಿತ್ರ ನಟ ಶರಣ್, ‘ಜನರ ಚಪ್ಪಾಳೆ ಹಾಗೂ ಕೂಗು ಕಲಾವಿದರ ಉಸಿರು ಮತ್ತು ಊಟ. ಅದು ಇರುವವರೆಗೂ ನಾವು ಇರುತ್ತೇವೆ’ ಎಂದರು.
‘ವಿದ್ಯೆ ಜೊತೆ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗೂ ಮಹತ್ವ ಕೊಡಬೇಕು. ಶಾಲೆಯಲ್ಲಿದ್ದಾಗ ನಾನು ‘ಎಂಪ್ಟಿ ಹೆಡ್’ ಎಂಬ ಚಿಕ್ಕ ನಾಟಕವೊಂದರಲ್ಲಿ ಕಾಂಪೌಂಡರ್ ಪಾತ್ರ ಮಾಡಿದ್ದೆ. ಕೊನೆ ಕ್ಷಣದಲ್ಲಿ ನನಗೆ ಆ ಅವಕಾಶ ಸಿಕ್ಕಿತ್ತು. ನನ್ನೊಳಗೊಬ್ಬ ಕಲಾವಿದ ಇದ್ದಾನೆ ಎಂಬುದನ್ನು ಆ ವೇದಿಕೆ ಗುರುತಿಸಿತು. ಹೀಗೆ, ಶಾಲಾ–ಕಾಲೇಜುಗಳ ವೇದಿಕೆಗಳು ಪ್ರತಿಭೆಯನ್ನು ಹೊರತರುತ್ತವೆ. ಅಂಥವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಒಳ್ಳೆಯ ಉದ್ದೇಶ ಇಟ್ಟುಕೊಂಡರೆ ಒಳ್ಳೆಯದೇ ಆಗುತ್ತದೆ. ಯಾವಾಗಲೂ ವಿದ್ಯಾರ್ಥಿಯಾಗಿದ್ದರೆ ಮಾತ್ರವೇ ಜೀವನ ಚೆನ್ನಾಗಿರುತ್ತದೆ. ಕಲಿಕೆಗೆ ಕೊನೆ ಎಂಬುದಿಲ್ಲ. ವಿದ್ಯಾರ್ಥಿಗಳು ಗುರುಗಳ ಬಗ್ಗೆ ಭಕ್ತಿಯ ಭಯ ಇಟ್ಟುಕೊಂಡಿರಬೇಕು’ ಎಂದರು.
ತಮ್ಮದೇ ‘ಗುರು ಶಿಷ್ಯರು’ ಚಲನಚಿತ್ರದ ‘ಬಳಪ ಹಿಡಿದ ಭಗವಂತ’ ಹಾಡು ಹಾಡಿ, ಪಾಲ್ಗೊಂಡಿದ್ದವರನ್ನು ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.