ADVERTISEMENT

ಪ್ರಾಚೀನ ಮೌಲ್ಯ, ಆಧುನಿಕತೆಯ ಸಮ್ಮಿಶ್ರಣ

ಜಯಚಾಮರಾಜ ಒಡೆಯರ್‌ ಬಗ್ಗೆ ವೆಂಕಯ್ಯ ನಾಯ್ಡು ಬಣ್ಣನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 16:58 IST
Last Updated 18 ಜುಲೈ 2020, 16:58 IST

ಮೈಸೂರು: ‘ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜ ಒಡೆಯರ್‌ ಅವರು ಭಾರತೀಯ ನಾಗರಿಕತೆಯ ಪ್ರಾಚೀನ ಮೌಲ್ಯಗಳು ಮತ್ತು ಪಾಶ್ಚಾತ್ಯ ಜಗತ್ತಿನ ಆಧುನಿಕತೆಯ ಸಮ್ಮಿಶ್ರಣದಂತೆ ಇದ್ದರು’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಣ್ಣಿಸಿದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ವರ್ಚ್ಯುವಲ್‌ ರೂಪದಲ್ಲಿ ಶನಿವಾರ ಆಯೋಜಿಸಿದ್ದ ಜಯಚಾಮರಾಜ ಒಡೆಯರ್‌ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಡೆಯರ್‌ ಅವರಲ್ಲಿದ್ದ ದೂರದೃಷ್ಟಿತ್ವ, ಹೃದಯವೈಶಾಲ್ಯವನ್ನು ನಾವು ಗೌರವಿಸಬೇಕು. ಅವರು ಜನಸಾಮಾನ್ಯರ ಜತೆ ಸದಾ ಸಂಪರ್ಕದಲ್ಲಿರಲು ಬಯಸಿದ್ದರು. ಜನರ ಶ್ರೇಯೋಭಿವೃದ್ಧಿಯಲ್ಲಿ ಸಂತಸ ಕಂಡಿದ್ದರು’ ಎಂದರು.

ADVERTISEMENT

‘ಮೈಸೂರು ಸಂಸ್ಥಾನವು ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ. ಶಾಂತಿಯಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಜಯಚಾಮರಾಜ ಒಡೆಯರ್‌ ತೋರಿಸಿಕೊಟ್ಟದ್ದರು. ಅವರು ತಿಳಿಸಿಕೊಟ್ಟ ಮೌಲ್ಯಗಳು ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಡಾ.ಕರಣ್‌ ಸಿಂಗ್‌ ಮತ್ತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್‌ ಮಾತನಾಡಿದರು. ಮೈಸೂರು ಅರಮನೆಯ ಸಭಾಂಗಣದಲ್ಲಿ ಬೃಹತ್‌ ಪರದೆ ಮೂಲಕ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಉದ್ಘಾಟಿಸಿದರು. ಯೂಟ್ಯೂಬ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ನೂರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.

2019ರ ಜುಲೈ18 ರಂದು ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿತ್ತು. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಉದ್ಘಾಟಿಸಿದ್ದರು. ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅ.10 ರಂದು ಅರಮನೆ ಆವರಣದಲ್ಲಿ ನಡೆದಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.