ಮೈಸೂರು: ಮೂಲಸೌಕರ್ಯ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ನೂರಾರು ನಿವಾಸಿಗಳು ನಗರದ ಯರಗನಹಳ್ಳಿ ಬಡಾವಣೆಯಲ್ಲಿರುವ ಮೆಗಾ ಡೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು ಮಾತನಾಡಿ, ‘ಮೈಸೂರು ಪೂರ್ವ ವಲಯ ವ್ಯಾಪ್ತಿಯ 30 ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಕರ್ಯ ಒದಗಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಸಕಾರಾತ್ಮಕ ಸ್ಪಂದನೆ ದೊರೆತ್ತಿಲ್ಲ. ನಾವು ಯಾವುದೇ ಪಕ್ಷದ ವಿರುದ್ಧ ಹೋರಾಟ ಮಾಡುತ್ತಿಲ್ಲ, ಜನರ ಸಮಸ್ಯೆ ಪರಿಹಾರವಷ್ಟೇ ನಮ್ಮ ಉದ್ದೇಶ’ ಎಂದರು.
‘12 ಅಂಶಗಳ ಆದ್ಯತೆಯ ಪಟ್ಟಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕಳುಹಿಸಿದ್ದೇವೆ. ನಮ್ಮ ಬಡಾವಣೆಗಳಲ್ಲಿ ಬಳಸುತ್ತಿರುವ ನೀರಿನಿಂದ ಕೂದಲು ಉದುರುವಿಕೆ, ಮೂಳೆ, ಕೀಲು ನೋವು, ಹೃದಯ ರಕ್ತನಾಳದ ಸಮಸ್ಯೆ, ಕಿಡ್ನಿ, ಚರ್ಮ ರೋಗ ಕಂಡುಬಂದಿದ್ದು, ಹೆಚ್ಚಿನ ಫ್ಲೋರೈಡ್ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಹೀಗಾಗಿ ನಮಗೆ ಕಾವೇರಿ ನೀರು ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.
‘ವಲಯ ವ್ಯಾಪ್ತಿಯ ಬಡಾವಣೆಗಳಲ್ಲಿ ಶೇ 40ರಷ್ಟು ಕೊಳಚೆ ನೀರು ಮತ್ತು ಎಸ್‌ಟಿಪಿ ಕಾಮಗಾರಿ ಬಾಕಿ ಉಳಿದಿವೆ. ಇದರಿಂದಾಗಿ ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ, ಕಾಲರಾ, ಡೆಂಗಿ ಕಾಯಿಲೆ ಜನರನ್ನು ಬಾಧಿಸುತ್ತಿವೆ. ಹೀಗಾಗಿ ಒಳಚರಂಡಿ ಮಾರ್ಗದ ನಿರ್ಮಾಣ ಮತ್ತು ಅನುಮೋದಿತ ರೇಖಾಚಿತ್ರಗಳ ಮಾನದಂಡದ ಪ್ರಕಾರ ಎಸ್‌ಟಿಪಿ ನಿರ್ಮಾಣ ಆಗಬೇಕು. ಹೊರ ವರ್ತುಲ ರಸ್ತೆ ಪಕ್ಕದಲ್ಲಿನ ತಿಪ್ಪಯ್ಯನ ಕೆರೆಯಲ್ಲಿ ಚರಂಡಿ ನೀರು ಸಂಗ್ರಹವಾಗಿದ್ದು, ಈ ಭಾಗದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಕುರಿತ ಸಮಸ್ಯೆ ನಿವಾರಿಸುವ ಮೂಲಕ ಗ್ರಾಹಕರಿಗೆ ತಡೆರಹಿತ ವಿದ್ಯುತ್ ಪೂರೈಸಬೇಕು. ಹೊಸ ಸಂಪರ್ಕ ರಸ್ತೆಗಳು ಮತ್ತು ಬೈಪಾಸ್ ರಸ್ತೆಗಳ ಸುಧಾರಣೆ ಮಾಡಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಅಗತ್ಯ ರಸ್ತೆಗಳ ನಿರ್ಮಾಣ, ರಿಪೇರಿ ಮತ್ತು ಡಾಂಬರೀಕರಣದ ಕೆಲಸ ಮಾಡಬೇಕಿದೆ. ಉದ್ಯಾನದಲ್ಲಿ ಮಕ್ಕಳಸ್ನೇಹಿ ಆಟಿಕೆ ಸಾಮಗ್ರಿಗಳ ಅಳವಡಿಕೆ, ಆಟದ ಮೈದಾನ, ಜಿಮ್ ಉಪಕರಣಗಳು, ಸಾರ್ವಜನಿಕ ಉದ್ಯಾನಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ತಿಳಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಎಂ.ಎಚ್. ಚೆಲುವೇಗೌಡ, ಎಲ್. ಪ್ರಕಾಶ್, ಎಂ.ಎಲ್. ಅರುಣ್, ಬೊಮ್ಮೇಗೌಡ, ಡಿ. ಕೃಷ್ಣೇಗೌಡ, ನರಸಿಂಹೇಗೌಡ, ಎಚ್.ಎಸ್.ರಾಘವೇಂದ್ರ ಭಟ್ ಇದ್ದರು.
ಒಗ್ಗಟ್ಟಾದ 30 ಬಡಾವಣೆ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.