ADVERTISEMENT

ಕಲ್ಲಂಗಡಿ, ಎಳನೀರಿಗೆ ಬೇಡಿಕೆ: ಬಿಸಿಲ ಬೇಗೆ ತಣಿಸಲು ಹಣ್ಣು, ಜ್ಯೂಸ್‌ ಮೊರೆಹೋದ ಜನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:20 IST
Last Updated 27 ಫೆಬ್ರುವರಿ 2026, 6:20 IST
ಎಚ್.ಡಿ. ಕೋಟೆ ಪಟ್ಟಣದ ಹಣ್ಣಿನ ಅಂಗಡಿಯಲ್ಲಿ ಬೇಸಿಗೆ ಹಿನ್ನಲೆ ವ್ಯಾಪಾರಿಗಳು ಕಲ್ಲಂಗಡಿ ಹಣ್ಣನ್ನು ಮಾರಲು ಅಣಿಮಾಡಿಕೊಂಡಿರುವುದು
ಎಚ್.ಡಿ. ಕೋಟೆ ಪಟ್ಟಣದ ಹಣ್ಣಿನ ಅಂಗಡಿಯಲ್ಲಿ ಬೇಸಿಗೆ ಹಿನ್ನಲೆ ವ್ಯಾಪಾರಿಗಳು ಕಲ್ಲಂಗಡಿ ಹಣ್ಣನ್ನು ಮಾರಲು ಅಣಿಮಾಡಿಕೊಂಡಿರುವುದು   

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಹಲವು ಕಡೆಗಳಲ್ಲಿ ಜನರ ಬಿಸಿಲಿನ ಬೇಗೆ ನಿವಾರಿಸಲು ಕಲ್ಲಂಗಡಿ, ತಂಪು ಪಾನೀಯ, ಎಳನೀರು ಮತ್ತು ಕಬ್ಬಿನ ಹಾಲಿನ ಅಂಗಡಿಗಳು ತಲೆ ಎತ್ತಿವೆ.

ಚಳಿ ಮುಗಿದು ಶಿವರಾತ್ರಿ ಸುಡುಬಿಸಿಲು ಏರುತ್ತಿದ್ದಂತೆ ಬಿಸಿಲ ಬೇಗೆ ಕೂಡ ಹೆಚ್ಚುತ್ತಿದ್ದು, ಹೀಗಾಗಿ ಬಿಸಿಲಿನ ದಾಹ ನೀಗಿಸುವ ಕಲ್ಲಂಗಡಿ ಮತ್ತು ಎಳನೀರಿನ ವ್ಯಾಪಾರ ಮೈಸೂರು- ಮಾನಂದವಾಡಿ ರಸ್ತೆ ಬದಿ ಮತ್ತು ವಿವಿಧ ಕಡೆಗಳಲ್ಲಿ ಜೋರಾಗಿದೆ. 

ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಕಲ್ಲಂಗಡಿ ಈ ಬಾರಿ ಫೆಬ್ರುವರಿಯಲ್ಲೇ ಬಂದಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚುತ್ತಿದೆ. ಅಂಗಡಿಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ADVERTISEMENT

ಒಂದು ಕೆ.ಜಿ ಕಲ್ಲಂಗಡಿ ₹25-₹30ಕ್ಕೆ ಮಾರಾಟವಾಗುತ್ತಿದ್ದು, ಪಟ್ಟಣದ ಅಂಗಡಿಗಳಲ್ಲಿ ಕತ್ತರಿಸಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಜನರು ಗುಂಪು ಗುಂಪಾಗಿ ಬಂದು ಹಣ್ಣನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿದೆ.

‘ಹೆಚ್ಚು ತಂಪು, ನೀರಿನ ಅಂಶ ಹೊಂದಿರುವುದರಿಂದ ಜನರು ಕಲ್ಲಂಗಡಿಯನ್ನು ಸೇವಿಸಿ ಬೇಸಿಗೆಯನ್ನು ನೀಗಿಸಿಕೊಳ್ಳಬಹುದು’ ಎನ್ನುತ್ತಾರೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಟಿ. ರವಿಕುಮಾರ್.

ಮೂರ್ನಾಲ್ಕು ತಿಂಗಳಿಂದ ಚಳಿಯಿಂದ ನಡುಗುತ್ತಿದ್ದ ಜನ ಈಗ ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಇದನ್ನು ಗಮನಿಸಿದ ಹಣ್ಣಿನ ವ್ಯಾಪಾರಿಗಳು ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿಯನ್ನು ಖರೀದಿಸಿ ತಂದು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಎಳನೀರು ಹಾಗೂ ತಂಪು ಪಾನೀಯಗಳ ಮಾರಾಟಗಾರರು ಬಸ್ ನಿಲ್ದಾಣ, ಪ್ರಮುಖ ವೃತ್ತಗಳು ಮತ್ತು ಜನರು ಹೆಚ್ಚು ಓಡಾಡುವ ರಸ್ತೆ ಬದಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ.

‘ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಕೆಲ ರೈತರು ಅಲ್ಪ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದು, ಗ್ರಾಹಕರ ಬೇಡಿಕೆ ಪೂರೈಸಲು ಮೈಸೂರಿನ ಮಾರುಕಟ್ಟೆಯಲ್ಲಿ ಕಲ್ಲಂಗಡಿಯನ್ನು ಖರೀದಿಸಿ ತರುತ್ತಿದ್ದೇವೆ’ ಎಂದು ಕಲ್ಲಂಗಡಿ ಹಣ್ಣಿನ ಅಂಗಡಿ ವ್ಯಾಪಾರಿ ಅಕ್ಬರ್ ತಿಳಿಸಿದರು.

ಎಳನೀರು ವ್ಯಾಪಾರಿ ಹರೀಶ್ ಮಾತನಾಡಿ 'ಸ್ಥಳೀಯವಾಗಿ ರೈತರ ಬಳಿ ಎಳನೀರನ್ನು ಖರೀದಿಸುತ್ತಿದ್ದು, ತೆಂಗು ಬೆಳೆದ ರೈತರಿಗೂ ಲಾಭ ದೊರೆಯುವಂತೆ ಹಣ ನೀಡಿ ಖರೀದಿಸುತ್ತಿದ್ದೇವೆ’ ಎಂದರು.

ಎಚ್.ಡಿ.ಕೋಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆ ಎಳನೀರು ಖರೀದಿಯಿಂದ ರೈತರಿಗೂ ಅನುಕೂಲ ಒಂದು ಕೆ.ಜಿ. ಕಲ್ಲಂಗಡಿ ₹35–₹40ಕ್ಕೆ ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.