
ರಾಜ್ಯಮಟ್ಟದ ಜೂನಿಯರ್ ಅಕ್ವೆಟಿಕ್ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪ್ರಶಸ್ತಿ ವಿಜೇತ ನೆಟ್ಟಕಲ್ಲಪ್ಪ ಈಜು ಕೇಂದ್ರ ತಂಡ.
ಮೈಸೂರು: ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದ ಸ್ಪರ್ಧಿಗಳು ಭಾನುವಾರ ಇಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಜೂನಿಯರ್ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಎತ್ತಿ ಹಿಡಿದರು. ಬಾಲಕಿಯರ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರವು ಚಾಂಪಿಯನ್ ಆಯಿತು.
ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ರಾಜ್ಯ ಈಜು ಸಂಸ್ಥೆಯು ಆಯೋಜಿಸಿದ್ದ ಸ್ಪರ್ಧೆಯ ಬಾಲಕರ ವಿಭಾಗದ ಫೈನಲ್‌ನಲ್ಲಿ ನೆಟ್ಟಕಲ್ಲಪ್ಪ ಕೇಂದ್ರವು 14–11 ಗೋಲುಗಳ ಅಂತರದಿಂದ ಸ್ಟಾರ್ ಈಜು ಕೇಂದ್ರವನ್ನು ಮಣಿಸಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಸವನಗುಡಿ ಈಜು ಕೇಂದ್ರವು 23–10 ಗೋಲುಗಳಿಂದ ಸ್ವಿಮ್ ಲೈಫ್ ತಂಡವನ್ನು ಪರಾಭವಗೊಳಿಸಿತು.
ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬಸವನಗುಡಿ ತಂಡವು 19–13 ಗೋಲುಗಳಿಂದ ನೆಟ್ಟಕಲ್ಲಪ್ಪ ಈಜು ಕೇಂದ್ರದ ವಿರುದ್ಧ ಜಯ ಸಾಧಿಸಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ವಿಮ್ ಲೈಫ್ ತಂಡವು 14–2 ಗೋಲುಗಳಿಂದ ಸೀ ವರ್ಲ್ಡ್ ಈಜು ಕೇಂದ್ರವನ್ನು ಸೋಲಿಸಿತು.
ನೆಟ್ಟಕಲ್ಲಪ್ಪ ಈಜು ಕೇಂದ್ರದ ಅಧ್ಯಯನ್ ಶಿರೋಳ ಹಾಗೂ ಪ್ರವದಾ ಮಾಲತೇಶ ಅವರು ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಉತ್ತಮ ಗೋಲ್‌ಕೀಪರ್ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.