ADVERTISEMENT

ಮೈಸೂರು ಸಾಹಿತ್ಯ ಉತ್ಸವ: ಸತ್ಯ ಹೇಳುವವರು ಎಲ್ಲಿದ್ದಾರೆ? ಪಿ.ಸಾಯಿನಾಥ್

ಮೈಸೂರು ಸಾಹಿತ್ಯ ಉತ್ಸವ ಉದ್ಘಾಟಿಸಿದ ಪತ್ರಕರ್ತ ಪಿ.ಸಾಯಿನಾಥ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 19:19 IST
Last Updated 19 ಜನವರಿ 2025, 19:19 IST
ಮೈಸೂರಿನಲ್ಲಿ ಭಾನುವಾರ ‘ಮೈಸೂರು ಸಾಹಿತ್ಯ ಉತ್ಸವ’ ಉದ್ಘಾಟಿಸಿದ ಪಿ.ಸಾಯಿನಾಥ್ ಮಾತನಾಡಿದರು
ಮೈಸೂರಿನಲ್ಲಿ ಭಾನುವಾರ ‘ಮೈಸೂರು ಸಾಹಿತ್ಯ ಉತ್ಸವ’ ಉದ್ಘಾಟಿಸಿದ ಪಿ.ಸಾಯಿನಾಥ್ ಮಾತನಾಡಿದರು   

ಮೈಸೂರು: ‘ದೆಹಲಿಯ ಗಡಿಗಳಲ್ಲಿ ನಡೆದ ರೈತ ಹೋರಾಟ, ಕೋವಿಡ್‌ನ ಸಾವುಗಳು, ವಲಸೆ ಸೇರಿದಂತೆ ದೇಶದಾದ್ಯಂತ ನಡೆದ ಘಟನೆಗಳ ಬಗ್ಗೆ ಸತ್ಯ ಹೇಳುವ ಪತ್ರಕರ್ತರು, ಕವಿಗಳು, ಓದುಗರು, ಬರಹಗಾರರು ಎಲ್ಲಿದ್ದಾರೆ’ ಎಂದು ಪತ್ರಕರ್ತ ಪಿ.ಸಾಯಿನಾಥ್ ಪ್ರಶ್ನಿಸಿದರು.

ಇಲ್ಲಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ‘ಮೈಸೂರು ಲಿಟ್ರರಿ ಅಸೋಸಿಯೇಷನ್’ ವತಿಯಿಂದ ಆಯೋಜಿಸಿದ್ದ 6ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.

‘ಮಾರ್ಚ್‌ 2020ರಿಂದ ಜನವರಿ 2022ರವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 47 ಲಕ್ಷವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದರೆ, ಗ್ಲೋಬಲ್ ಡೆವಲಪ್‌ಮೆಂಟಲ್ ಕೌನ್ಸಿಲ್ 49 ಲಕ್ಷವೆಂದು ತಿಳಿಸಿದೆ. ಆದರೆ, ಕೇಂದ್ರ ಸರ್ಕಾರ 4.86 ಲಕ್ಷವೆಂದು ಹೇಳುತ್ತದೆ. ಈ ಮೂಲಕ ಸತ್ಯ ಮುಚ್ಚಿಡಲಾಗಿದೆ’ ಎಂದು ದೂರಿದರು.

ADVERTISEMENT

‘ಅಟಾರ್ನಿ ಜನರಲ್ ಅವರು ಸುಪ್ರೀಕೋರ್ಟ್‌ಗೆ ಮಾರ್ಚ್‌ 21ರಂದು ಒಬ್ಬರೇ ಒಬ್ಬರೂ ವಲಸೆ ಹೋಗಿಲ್ಲವೆಂದರು. 14 ದಿನದ ನಂತರ 23,572 ವಲಸಿಗರಿಗೆ ಗಂಜಿಕೇಂದ್ರ ಸ್ಥಾ‍ಪಿಸಲಾಗಿದೆಯೆಂದು ಹೇಳುತ್ತಾರೆ. ಇವು ಯಾರಿಗಾಗಿ ಸ್ಥಾಪನೆಯಾಗಿದ್ದವು?’ ಎಂದು ಕೇಳಿದರು.

‘ಕೋವಿಡ್‌ನಲ್ಲಿ ವಲಸಿಗರಿಗೆ ರೈಲ್ವೆ ಇಲಾಖೆಯು ಶ್ರಮಿಕ್‌ ರೈಲುಗಳನ್ನು ಆರಂಭಿಸಿತ್ತು. 25 ದಿನಗಳಲ್ಲಿ 91 ಲಕ್ಷ ಮಂದಿ ಶ್ರಮಿಕರು ಪ್ರಯಾಣಿಸಿದ್ದಾರೆ ಎಂದಿತ್ತು. ಸುಮಾರು 2 ಕೋಟಿ ಜನರು ನಗರಗಳಿಂದ ಊರುಗಳಿಗೆ ಮರಳಿದ್ದರು. ದೇಶ ವಿಭಜನೆಯಾದಾಗ ಆದ ವಲಸೆಗಿಂತಲೂ ಹೆಚ್ಚಿನ ಪ್ರಮಾಣ ಇದಾಗಿದೆ’ ಎಂದರು.

‘ದೆಹಲಿಯ ಗಡಿಗಳಲ್ಲಿ ನಡೆದ ರೈತ ಹೋರಾಟದಲ್ಲಿ 730 ರೈತರು ಮೃತಪಟ್ಟರು. ಮೂರು ದಶಕಗಳಲ್ಲಿಯೇ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮಾದರಿ ಹೋರಾಟವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರವು ಸೇನೆ ಬಳಸಿತ್ತು. ತನ್ನದೇ ಕಾನೂನುಗಳನ್ನು ಉಲ್ಲಂಘಿಸಿತ್ತು’ ಎಂದು ಆರೋಪಿಸಿದರು.

‘ದೇಶದಲ್ಲಿ ನಡೆಯುವ ಅನ್ಯಾಯಗಳನ್ನು ನೋಡುತ್ತಾ ಕೂರಲಾಗದು. ಕವಿಗಳು, ರಂಗಕರ್ಮಿಗಳು, ಪತ್ರಕರ್ತರು ದನಿಯೇರಿಸಬೇಕು. ಒಳ್ಳೆಯ ಬರಹ, ಸಾಹಿತ್ಯವು ವ್ಯವಸ್ಥೆ ಬದಲಿಸಬಲ್ಲದೆಂದು ನಂಬಿದ್ದೇನೆ. ಗಾಂಧಿ, ಅಂಬೇಡ್ಕರ್, ಭಗತ್‌ ಸಿಂಗ್ ಕೂಡ ಪತ್ರಕರ್ತರಾಗಿ ಸ್ವರಾಜ್ಯ, ವ್ಯಕ್ತಿ ಘನತೆ, ಸ್ವಾತಂತ್ರ್ಯದ ಬಗ್ಗೆ ನಿರಂತರವಾಗಿ ಬರೆದರು’ ಎಂದು ಸ್ಮರಿಸಿದರು.

‘ಮೈಸೂರು ಲಿಟ್ರರಿ ಅಸೋಸಿಯೇಷನ್’ ಅಧ್ಯಕ್ಷ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಹಾಜರಿದ್ದರು.

‘ಪುಸ್ತಕಗಳೆಡೆಗೆ ಮರಳಬೇಕಿದೆ’

‘ಆಕ್ಸ್‌ಫರ್ಡ್ ನಿಘಂಟು 2024ರ ವರ್ಷದ ಪದವೆಂದು ‘ಬ್ರೈನ್‌ ರಾಟ್‌’ ಅನ್ನು ಹೇಳಿದೆ. ವ್ಯಕ್ತಿಯ ಬೌದ್ಧಿಕತೆಯ ಕೊಳೆಯುವಿಕೆಯು ಕ್ಷುಲ್ಲಕ ವಿಚಾರದೆಡೆಗಿನ ಆಸಕ್ತಿಯಿಂದ ಇದು ಬಂದಿದೆ. ಆನ್‌ಲೈನ್‌ನಲ್ಲಿ ಹೆಚ್ಚು ಕಳೆಯುವುದಕ್ಕಿಂತ ಪುಸ್ತಕಗಳೆಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕಿದೆ’ ಎಂದರು. ‘ಮೊಬೈಲ್‌ ಫೋನ್‌ನಲ್ಲಿ ಹೆಚ್ಚು ಹೊತ್ತು ಕಳೆಯುವುದಕ್ಕೆ ‘ಡೂಮ್‌ಸ್ಕ್ರೋಲಿಂಗ್’ ಎನ್ನುತ್ತಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸ್ವೀಡನ್ ಸರ್ಕಾರವು ಮೊದಲು ಪಠ್ಯಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಿತ್ತು. ಇದೀಗ ಎಚ್ಚೆತ್ತು ಮತ್ತೆ ಪುಸ್ತಕಗಳ ಬಳಕೆ ಕಡ್ಡಾಯಗೊಳಿಸಿದೆ’ ಎಂದು ಹೇಳಿದರು. ‘ಕೃತಕ ಬುದ್ಧಿಮತ್ತೆಯು ಸಂಶೋಧನೆ ಆಲೋಚನೆ ಸಾಮರ್ಥ್ಯವನ್ನು ಕುಗ್ಗಿಸಿದೆ. ಅದರ ನೆರವಿನಲ್ಲಿ ವಿದ್ಯಾರ್ಥಿಗಳು ಬರೆದ ಪ್ರಬಂಧ ಗುರುತಿಸಲು ಪ್ರಾಧ್ಯಾಪಕರೂ ಎಐ ಮೊರೆ ಹೋಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.