ADVERTISEMENT

ದಸರಾ ಉದ್ಘಾಟನೆಗೆ 200 ಜನ ಏಕೆ: ಸಾಹಿತಿ ಭೈರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 10:14 IST
Last Updated 10 ಅಕ್ಟೋಬರ್ 2020, 10:14 IST
ಮೈಸೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರಿಗೆ 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾಲ್ಗೊಂಡಿದ್ದರು
ಮೈಸೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರಿಗೆ 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾಲ್ಗೊಂಡಿದ್ದರು   

ಮೈಸೂರು: ದಸರಾ ಉದ್ಘಾಟನಾ ಸಮಾರಂಭ ಮತ್ತು ಜಂಬೂ ಸವಾರಿಗೆ ಜನರನ್ನು ಸೇರಿಸುವುದಕ್ಕೆ ಸಾಹಿತಿ ಎಸ್‌.ಎಲ್‌.ಭೈರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ದಸರಾ ಉದ್ಘಾಟನಾ ಸಮಾರಂಭಕ್ಕೆ 200 ಜನರಿಗೆ ಅವಕಾಶ ನೀಡಿರುವುದು ಸರಿಯಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗಾರರಲ್ಲಿ ತಿಳಿಸಿದರು.

ಜನರು ಅವರವರ ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ. ಅರಮನೆಯವರು ಅವರ ಪಾಡಿಗೆ ಜಂಬೂ ಸವಾರಿ ನಡೆಸಲಿ. ಆನೆಯ ಮೇಲೆ ಅಂಬಾರಿ ಇಟ್ಟು ಮೆರವಣಿಗೆ ನಡೆಸುವ ಕೆಲಸ ಮಾವುತರು ಮಾಡುತ್ತಾರೆ. ಜನರನ್ನು ಸೇರಿಸುವುದು ಏಕೆ? ಎಂದರು.

ADVERTISEMENT

ದಸರೆ ಅದ್ದೂರಿಯಾಗಿ ಮಾಡದಿದ್ದರೆ ನಮಗೆ ಬ್ಯುಸಿನೆಸ್‌ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಬ್ಯುಸಿನೆಸ್‌ ಇಲ್ಲ ಎನ್ನುವುದು ಸರಿ. ಆದರೆ ಹೆಚ್ಚು ಜನರನ್ನು ಸೇರಿಸಿದಾಗ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿದರೆ ಅದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಪ್ರಶಸ್ತಿ ಪ್ರದಾನ: ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

‘ಶಿವರಾಮ ಕಾರಂತರ ಹೆಸರಿನಲ್ಲಿ ಹುಟ್ಟೂರ ಪ್ರಶಸ್ತಿಯನ್ನು ಕಳೆದ ಕೆಲ ವರ್ಷಗಳಿಂದ ಕೊಡಮಾಡಲಾಗುತ್ತಿದೆ. ಕಾರಂತ ಅವರು ಕಂಡದ್ದನ್ನು ಕಂಡಂತೆಯೇ ಹೇಳುವವರು. ಯಾವುದೇ ವಿಷಯದಲ್ಲಿ ರಾಜಿ ಆಗುತ್ತಿರಲಿಲ್ಲ. ಕಂಡದ್ದನ್ನು ಕಂಡಂತೆಯೇ ಹೇಳುವುದರಲ್ಲಿ ಕಾರಂತ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕನ್ನಡದ ಮತ್ತೊಬ್ಬ ಸಾಹಿತಿ ಎಸ್‌.ಎಲ್‌.ಭೈರಪ್ಪ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಶಿವರಾಮ ಕಾರಂತ ಅವರ ಸಾಲಿನಲ್ಲಿ ನಿಲ್ಲಬಲ್ಲ ಮತ್ತೊಬ್ಬ ಸಾಹಿತಿ ಭೈರಪ್ಪ ಅವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.