ಸರಗೂರು: ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ರೈತರು, ಲಂಕೆ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ವಲಯ ಅರಣ್ಯ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಕಾರರು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು.
ರೈತರ ಜಮೀನುಗಳು ಕಾಡಂಚಿನ ಭಾಗಗಳಲ್ಲಿದ್ದು, ಈ ಭಾಗದಲ್ಲಿ ಬೆಳೆಯುವ ಬೆಳೆಗಳಿಗೆ ಕಾಡುಪ್ರಾಣಿಗಳು ಹಾನಿ ಮಾಡುತ್ತಿವೆ. ಚಿಕ್ಕದೇವಮ್ಮನ ಬೆಟ್ಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿ ತಡೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್‌ಗೌಡ ಮಾತನಾಡಿ, ಲಂಕೆ ಗ್ರಾಮದ ಕಾಡಂಚಿನಿಂದ ದಡದಹಳ್ಳಿವರೆಗೆ ರೈಲ್ವೇ ಬ್ಯಾರಿಕೇಡ್, ಸೋಲಾರ್ ತಂತಿ ಅಳವಡಿಸಬೇಕು. ಸ್ಥಳದಲ್ಲಿಯೇ ಸೂಕ್ತ ರೀತಿಯಲ್ಲಿ ಬೆಳೆಗೆ ನಷ್ಟ ಭರಿಸಬೇಕು. ಓಂಕಾರ್ ಮತ್ತು ನುಗು ಜಲಾಶಯದಂಚಿನಲ್ಲಿ ಶಾಶ್ವತ ಯೋಜನೆ ರೂಪಿಸಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆ ಕ್ರಮವಹಿಸಬೇಕು ಎಂದರು.
ಮನುಗನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾವಲು ಕಾಯಬೇಕು. ಕಾಡಾನೆಗಳನ್ನು ಬೇರಡೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ದಸಂಸ ಮುಖಂಡ ಲಂಕೆ ಶ್ರೀನಿವಾಸ ಮಾತನಾಡಿ, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಸರ್ಕಾರ ಅನುದಾನ ಬಿಡುಗಡೆಗೊಳಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚಿಕ್ಕದೇವಮ್ಮನ ಬೆಟ್ಟದ ಸುತ್ತಲಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ತಡೆಗೆ ಇಲಾಖೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭ ರೈತರು ಡಿಸಿಎಫ್‌ಎಲ್ ನಂದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಎಸಿಎಫ್‌ಗಳಾದ ಸುಮಿತ್ರಾ ಎಸ್.ಪರಮೇಶ್, ಸರ್ಕಲ್ ಇನಸ್ಪೆಕ್ಟರ್ ಪ್ರಸನ್ನಕುಮಾರ್, ಎಚ್.ಡಿ.ಕೋಟೆ ಗಂಗಾಧರ್, ಪಿಎಸ್‌ಐಗಳಾದ ಕಿರಣ್, ಚಂದ್ರಹಾಸ, ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಗೋಪಾಲ್, ಆರ್‌ಎಫ್‌ಓಗಳಾದ ಮಹಾಲಕ್ಷ್ಮಿ, ವಿವೇಕ್, ಡಿಆರ್‌ಎಫ್‌ಓ ಅಕ್ಷಯ್ ಕುಮಾರ್, ದಿಲೀಪ್ ಕುಮಾರ್, ನೀತಿನ್, ಸಮಂತ್, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ ಪಾಲ್ಗೊಂಡಿದ್ದರು.
‘ಶಾಶ್ವತ ಪರಿಹಾರಕ್ಕೆ ಶೀಘ್ರ ಕ್ರಮ’:
‘ಬೆಳೆ ಪರಿಹಾರ ಅರ್ಜಿಗಳು ವಿಲೇವಾಗಿದೆ. ಇನ್ನೂ 15 ದಿನಗಳಲ್ಲಿ ಎಲ್ಲಾ ಅರ್ಜಿಗಳಿಗೆ ಪರಿಹಾರ ನೀಡಲಾಗುವುದು. ಆನೆಗಳನ್ನು ಬೇರಡೆ ಸ್ಥಳಾಂತರಿಸಲು ಕ್ರಮವಹಿಸಲಾಗುವುದು. ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಲಾಗುವುದು. ಈಗಾಗಲೇ ನೀಡಲಾದ ಬೇಡಿಕೆಗಳನ್ನು ಅರಣ್ಯ ಸಚಿವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು’ ಎಂದು ಮನವಿ ಸ್ವೀಕರಿಸಿದ ಡಿಸಿಎಫ್ ಎಲ್.ನಂದೀಶ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.