
ಮೈಸೂರು: ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿ, ಚಾರಣವನ್ನು ಸ್ಥಗಿತ ಗೊಳಿಸಿರುವ ಪರಿಣಾಮ ‘ವನ್ಯಜೀವಿ ಪ್ರವಾಸೋದ್ಯಮ’ಕ್ಕೆ ಹೊಡೆತ ಬಿದ್ದಿದೆ.
ರೆಸಾರ್ಟ್‌ಗಳು, ಸುತ್ತಮುತ್ತಲಿನ ಹೋಂ ಸ್ಟೇ ಹಾಗೂ ಹೋಟೆಲ್‌ಗಳ ಆದಾಯದ ಮೇಲೆ ಪರಿಣಾಮ ಬೀರಿದೆ. ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಅವಲಂಬಿಸಿರುವವರೂ ನಷ್ಟ ಎದುರಿಸುತ್ತಿದ್ದಾರೆ. ಸಫಾರಿ ಕೇಂದ್ರಗಳು ಬಿಕೋ ಎನ್ನುತ್ತಿವೆ. ವಾರಾಂತ್ಯ ಗಿಜಿಗುಡುತ್ತಿದ್ದ ಸಫಾರಿ ಕೇಂದ್ರಗಳಲ್ಲಿ ಕಲರವ ಇಲ್ಲದಂತಾಗಿದೆ.
ಜಿಲ್ಲೆಯ ಸರಗೂರು ತಾಲ್ಲೂಕಿನ ಕಾಡಂಚಿನಲ್ಲಿ ಹುಲಿ ದಾಳಿ ಹೆಚ್ಚಿದ, ಮೂವರ ಸಾವು ಹಿನ್ನಲೆಯಲ್ಲಿ ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿ ಹಾಗೂ ಚಾರಣವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯಂತೆ ನ.7ರಿಂದ ಬಂದ್ ಮಾಡಲಾಗಿದೆ.
ಆದಾಯ ಖೋತಾ: ವನ್ಯಜೀವಿ ಪ್ರವಾಸೋದ್ಯಮದಿಂದ ರಾಜ್ಯ ಸರ್ಕಾರಕ್ಕೆ ನಿತ್ಯ ₹ 15 ಲಕ್ಷಕ್ಕೂ ಹೆಚ್ಚಿನ ಆದಾಯ ‘ಖೋತಾ’ ಆಗುತ್ತಿದೆ ಎಂದು ಅಂದಾಜಿಸಲಾಗಿದೆ.
ವಿವಿಧೆಡೆಯಿಂದ ಬರುವ ಪ್ರವಾಸಿಗರೆಂದೇ ಸಫಾರಿ ಆರಂಭಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಸಫಾರಿ ಶುಲ್ಕವನ್ನೂ ಹೆಚ್ಚಿಸಲಾಗಿತ್ತು. ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಪ್ರವಾಸಿಗರನ್ನು ಸೆಳೆಯಲು ವಿವಿಧ ಪ್ಯಾಕೇಜ್‌ಗಳನ್ನು ರೂಪಿಸಿತ್ತು.
ಎಚ್.ಡಿ. ಕೋಟೆ ತಾಲ್ಲೂಕು ದಮ್ಮನಕಟ್ಟೆ ಸಫಾರಿ ಕೇಂದ್ರ ಸಮೀಪದ ಹೊಸಹೊಳಲು ಗ್ರಾಮದಲ್ಲಿ ಇತ್ತೀಚೆಗೆ ಹುಲಿಯು ಹಸುವನ್ನು ಕೊಂದಿದೆ. ಸಫಾರಿಗೆ ನಿರ್ಬಂಧ ನಂತರವೂ ದಾಳಿ ನಡೆದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ಪ್ರವಾಸಿಗರ ಸಂಖ್ಯೆ ಕ್ಷೀಣ...
ಬಂಡೀಪುರದ ಮೇಲುಕಾಮನ ಹಳ್ಳಿಯಲ್ಲಿರುವ ಸಫಾರಿ ಕೇಂದ್ರದಲ್ಲಿ ನಿತ್ಯ ಸರಾಸರಿ ₹ 2 ಲಕ್ಷ ವಾರಾಂತ್ಯದಲ್ಲಿ ₹ 5 ಲಕ್ಷದವರೆಗೆ ಆದಾಯ ಬರುತ್ತಿತ್ತು. ಜೆಎಲ್‌ಆರ್‌ಗೆ ದಿನಕ್ಕೆ ₹ 80ಸಾವಿರಕ್ಕೂ ಹೆಚ್ಚಿನ ಆದಾಯವಿತ್ತು. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿ ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ವಲಯದಲ್ಲಿನ ಸಫಾರಿಗೂ ಹೆಚ್ಚು ಜನರು ಬರುತ್ತಿದ್ದರು. ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ತಗ್ಗಿದೆ’ ಎಂದು ಜೆಎಲ್‌ಆರ್‌ನ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಹುಲಿ ದಾಳಿ ಪ್ರಕರಣಗಳು ಹೆಚ್ಚಲು ಸಫಾರಿ ಟ್ರಿಪ್ ಹೆಚ್ಚಳ ಅಥವಾ ರೆಸಾರ್ಟ್‌ಗಳು ಕಾರಣವಲ್ಲ. ಸರ್ಕಾರ ವೈಜ್ಞಾನಿಕವಾಗಿ ಯೋಚಿಸಿ ಕ್ರಮ ವಹಿಸಲಿ.– ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ಜನರ ಪ್ರಾಣ ರಕ್ಷಣೆಗೆ ಆದ್ಯತೆ ನೀಡಿ ಸಫಾರಿ ಮತ್ತು ಚಾರಣ ಬಂದ್ ಮಾಡಲಾಗಿದೆ. ಮುಂದಿನ ಕ್ರಮದ ಬಗ್ಗೆ ಚರ್ಚಿಸುವೆ.– ಈಶ್ವರ ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.