ಜಯಪುರ: ಶಿಕ್ಷಣ, ಔದ್ಯೋಗಿಕ ಕ್ಷೇತ್ರ, ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ಸಬಲೀಕರಣ ಹೊಂದಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಚಮನ್ ಲಾಲ್ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್‌ವಿವೈಎಂ)ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಜಯಪುರ ಶಾಖೆಯಲ್ಲಿ ತರಬೇತಿ ಪಡೆದ ಫ್ಯಾಷನ್ ಡಿಸೈನಿಂಗ್ ಹಾಗೂ ಬ್ಯೂಟಿಷಿಯನ್ ಅಭ್ಯರ್ಥಿಗಳಿಗೆ ಗುರುವಾರ ಪ್ರಮಾಣ ಪತ್ರ ವಿತರಣೆ, ನೂತನ ಅಭ್ಯರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆರ್ಥಿಕ ಸಬಲೀಕರಣ ಸಾಧಿಸಲು ಮಹಿಳೆಯರ ಸಹಭಾಗಿತ್ವ ಮುಖ್ಯ. ಕೌಶಲ ಕಲಿತ ಎಲ್ಲರೂ ಬುದ್ಧಿವಂತರು. ವಿವಿಧ ರಂಗಗಳಲ್ಲಿ ಕೆಲಸ ಸಾಕಷ್ಟಿದ್ದು, ಜೀವನ ಕಟ್ಟಿಕೊಳ್ಳಬೇಕು ಎಂದರು. ಮಹಿಳೆಯರು ಆರ್ಥಿಕ, ಔದ್ಯೋಗಿಕ ವಾಗಿ ಸಬಲರಾಗಿರುವುದು ದೇಶದ ಪ್ರಗತಿಗೆ ಪೂರಕ ಎಂದರು.
ಎಸ್.ವಿ.ವೈ.ಎಂ. ನಿರ್ದೇಶಕ ಡೆನ್ನಿಸ್ ಡಿ. ಚೌಹಾಣ್ ಮಾತನಾಡಿ, ‘ಎಷ್ಟೇ ಕಷ್ಟವಾದರೂ ಕಲಿತ ಕೌಶಲವನ್ನು ಅರ್ಧಕ್ಕೆ ಬಿಡದೆ, ಮುಂದುವರಿಸಬೇಕು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯಿಂದ ಸಂಸ್ಥೆಯಲ್ಲಿ ಕೌಶಲ ತರಬೇತಿ ಪಡೆದವರಿಗೆ ಉದ್ಯಮ ಆರಂಭಿಸಲು₹50ಸಾವಿರ ಮೊತ್ತ ಬಡ್ಡಿ ರಹಿತ ಸಾಲ ನೀಡಲಾಗುವುದು. ಒಂದು ವರ್ಷದ ಒಳಗೆ ಸಾಲ ಮರುಪಾವತಿ ಮಾಡಬೇಕು’ ಎಂದರು.
ಜಯಪುರ ಗ್ರಾಮ ಪಂಚಾಯಿತಿ ಪಿಡಿಒ ಬಸವಣ್ಣ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆಯಬೇಕು. ಸರ್ಕಾರ ಮಹಿಳೆಯರಿಗೆ ನೀಡುವ ಯೋಜನೆಗಳನ್ನು ಸದುಪಯೋಗ ಪಡಿಸಬೇಕು. ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಅದನ್ನು ಜೀವನೋಪಾಯಕ್ಕೆ ಬಳಸಿಕೊಳ್ಳಬೇಕು ಎಂದರು.
ಎಸ್‌ವಿವೈಎಂ ಸಂಸ್ಥೆಯ ಚಿನ್ನಾಮಹಾದೇವ, ಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಜಯಭಾರತಿ, ಅಬ್ದುಲ್ ರಶೀದ್ ಹಾಗೂ ಸಂಸ್ಥೆಯಲ್ಲಿ ಕೌಶಲ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯ ಅನಿಸಿಕೆ ಹಂಚಿಕೊಂಡರು. ಬ್ಯೂಟಿಷಿಯನ್ ಮತ್ತು ಫ್ಯಾಷನ್ ಡಿಸೈನಿಂಗ್ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದರು. ಕ್ಷೇತ್ರ ಮಾರ್ಗದರ್ಶಕರಾದ ಸಿದ್ಧರಾಜು, ರುಕ್ಮಿಣಿ, ರವಿ, ನೇತ್ರಾವತಿ, ಪಲ್ಲವಿ ಭಾಗವಹಿಸಿದ್ದರು.
ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ವಿವಿಧ ಸ್ಥರದಲ್ಲಿ ಕೌಶಲಗಳನ್ನು ಪಡೆಯಬೇಕು. .ಮನೆಯ ವಾತಾವರಣವನ್ನು ಉತ್ತಮವಾಗಿಸಿಕೊಂಡು ಜವಾಬ್ದಾರಿಯುತ ಜೀವನವನ್ನು ಘನತೆಯಿಂದ ಕಟ್ಟಿಕೊಳ್ಳಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.