
ಮೈಸೂರು: ‘ಮಹಿಳೆಯರು ಗಟ್ಟಿ ಧ್ವನಿ ರೂಢಿಸಿಕೊಳ್ಳಬೇಕು. ವರ್ತಮಾನದ ತಲ್ಲಣಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕು’ ಎಂದು ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಹೇಳಿದರು.
ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಸಮತಾ ವಿಚಾರ ವೇದಿಕೆ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಶತಮಾನದ ಹಿಂದೆ ಮಹಿಳಾ ದಿನಾಚರಣೆ ಎಂಬ ಪರಿಕಲ್ಪನೆ ರೂಪುಗೊಂಡಿದ್ದೇ ಅನಕ್ಷರಸ್ಥ ಕಾರ್ಮಿಕ ಮಹಿಳೆಯರಿಂದ. ಹೆಣ್ಣು ಮಕ್ಕಳು ಮೊದಲು ಮಾತನಾಡುವುದನ್ನು ಕಲಿಯಬೇಕು’ ಎಂದರು.
‘ಶಿಕ್ಷಕರಾದವರು ಮಕ್ಕಳನ್ನು ಬೆಳೆಸುವ ಮೊದಲು ತಾವು ಬೆಳೆಯಬೇಕು. ಜಗತ್ತಿನ ಆಗುಹೋಗುಗಳ ಬಗ್ಗೆ ಅರಿವಿರಬೇಕು. ಪರೀಕ್ಷೆ ನಮ್ಮ ಕರ್ಮ. ಅದರಾಚೆಗೆ ನಮ್ಮ ವ್ಯಕ್ತಿತ್ವ ಅರಳಿಸಿಕೊಳ್ಳುವುದು, ಇನ್ನೊಬ್ಬರನ್ನು ಪ್ರೇರೇಪಿಸುವುದು ನಿಜವಾದ ಮನೋಸ್ಥೈರ್ಯವಾಗಿದೆ. ನಾವು ಏನನ್ನು ಹೇಳುತ್ತೇವೋ ಅದನ್ನು ನಾವು ಮೊದಲು ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಧಾನ ಉಪನ್ಯಾಸ ನೀಡಿದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಸುಕನ್ಯಾ ಕನಾರಳ್ಳಿ, ‘ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳುವಂತೆ ಜಗತ್ತಿನ ಶೇ 66 ಕೆಲಸ ಮಾಡುವುದು ಹೆಂಗಸು. ಆದರೆ ಅವರಲ್ಲಿನ ಒಟ್ಟು ಸಂಪತ್ತು ಶೇ 1ರಷ್ಟು ಮಾತ್ರ. ಸಂಸತ್ತಿನಲ್ಲಿ ಇಂದು ಎಷ್ಟು ಮಂದಿ ಹೆಂಗಸರಿದ್ದಾರೆ? ಎಷ್ಟು ಮಂದಿ ಅಧಿಕಾರಯುತ ಹುದ್ದೆಗಳಲ್ಲಿ ಇದ್ದಾರೆ?’ ಎಂದು ಪ್ರಶ್ನಿಸಿದರು.
‘ಗಂಡು- ಹೆಣ್ಣು ಎಂಬುದು ಜೈವಿಕ ಐಡೆಂಟಿಟಿ. ಆದರೆ ಹೆಂಗಸು- ಗಂಡಸು ಎಂಬುದು ಸಾಮಾಜಿಕ ಐಡೆಂಟಿಟಿ. ಕುಟುಂಬ ನನ್ನ ನೆಲೆ. ಅದರಲ್ಲಿ ನಾನೊಂದು ಹೆರುವ ಗರ್ಭ. ಹಿರಿಯರ ಕಾಳಜಿ ನನ್ನ ಜವಾಬ್ದಾರಿ ಎನ್ನುವುದು ಈಗಿರುವ ಸಾಮಾಜಿಕ ಕಲ್ಪನೆ. ಅದನ್ನು ಬದಲಿಸಬೇಕಿದೆ’ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಸಂಚಾಲಕ ಎಸ್. ಚಂದ್ರಕಿರಣ್ ಕುಳವಾಡಿ, ಬಿಜಿಎಸ್ ಬಿಇಡಿ ಕಾಲೇಜು ಪ್ರಾಂಶುಪಾಲರಾದ ಡಾ.ನಾಗರಾಜು, ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಎನ್. ಯೋಗೇಶ, ಶಭಾನ ಮೈಸೂರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.