ADVERTISEMENT

ಮಹಿಳಾ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಕ್ಷಿಪ್ರ ಕಾರ್ಯಪಡೆಗೆ ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:35 IST
Last Updated 30 ಅಕ್ಟೋಬರ್ 2025, 4:35 IST
   

ಮೈಸೂರು: ‘ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ತಕ್ಷಣವೇ ಕ್ಷಿಪ್ರ ಕಾರ್ಯಪಡೆ ರಚಿಸಿ ಕ್ರಮ ಕೈಗೊಂಡು ಸ್ತ್ರೀಯರಲ್ಲಿ ಭರವಸೆ ತುಂಬಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆಗ್ರಹಿಸಿದರು.

‘ಅಕ್ಟೋಬರ್‌ನಲ್ಲೇ ನಾಲ್ಕಾರು ಪ್ರಕರಣಗಳು ರಾಜ್ಯದಾದ್ಯಂತ ವರದಿ ಆಗಿವೆ. ಕೆಲವು ಕಡೆ ಪ್ರಕರಣದ ಕುರಿತು ಮೊದಲೇ ಮಾಹಿತಿ ಇದ್ದರೂ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಸರ್ಕಾರ ಸಮರ್ಪಕ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಇಷ್ಟೆಲ್ಲ ಭಾಗ್ಯದ ಜೊತೆಗೆ ಮಹಿಳೆಯರಿಗೆ ಅತ್ಯಾಚಾರ– ದೌರ್ಜನ್ಯದ ಭಾಗ್ಯವನ್ನೂ ಕೊಟ್ಟರೆ ಏನು ಉಪಯೋಗ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮಹಿಳೆಯರ ಮೇಲಿನ ದೌರ್ಜನ್ಯ, ಸೈಬರ್ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿದ್ದು, ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮೈಸೂರಿನಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಇನ್ನೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಧರ್ಮಸ್ಥಳದ ಒಂದು ಕಾಲ್ಪನಿಕ ಕ್ರೈಂಗೆ ಎಸ್‌ಐಟಿ ತನಿಖೆಗೆ ಒತ್ತಾಯಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಏಕೆ ಪ್ರಕರಣದಲ್ಲಿ ಸೂಕ್ತ ತನಿಖೆಗೆ ಒತ್ತಾಯಿಸುತ್ತಿಲ್ಲ. ನೊಂದ ಕುಟುಂಬದ ಪರ ನಿಂತಿಲ್ಲ. ಕೇವಲ ರೀಲ್ಸ್‌, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡುವುದೇ ಅಧ್ಯಕ್ಷರ ಕೆಲಸ ಅಲ್ಲ. ಕೆಲಸ ಮಾಡಲು ಆಗದೇ ಇದ್ದರೆ ಅಧ್ಯಕ್ಷೆ ಹುದ್ದೆಗೆ ಮೊದಲು ರಾಜೀನಾಮೆ ನೀಡಿ’ ಎಂದು ಆಗ್ರಹಿಸಿದರು.

‘ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ ಮಾತನಾಡುವ ಪ್ರಿಯಾಂಕ್‌ ಖರ್ಗೆಗೆ ತಮ್ಮದೇ ಕಲಬುರಗಿ ಜಿಲ್ಲೆಯ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿಲ್ಲ. ಇಂತಹ ದೌರ್ಜನ್ಯ ನಡೆದಾಗ ಪ್ರತಿಪಕ್ಷ ಸ್ಪಂದಿಸುತ್ತಿದೆಯೇ ಹೊರತು ಸರ್ಕಾರ ಸ್ಪಂದಿಸುತ್ತಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನೊಂದ ಕುಟುಂಬದ ಪರ ನಿಂತಿದೆ. ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಪತ್ರ ಬರೆದಿದ್ದೇವೆ’ ಎಂದರು.

ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ರಾಜ್‌, ಪ್ರಧಾನ ಕಾರ್ಯದರ್ಶಿ ಬಿ.ಯು. ಚಂದ್ರಕಲಾ, ಮಾಧ್ಯಮ ವಕ್ತಾರ ಮಹೇಶ್‌ರಾಜೇ ಅರಸ್‌, ಕಾರ್ತಿಕ್‌ ಮರಿಯಪ್ಪ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.